Saturday, August 1, 2026
Homeಜಿಲ್ಲೆಮಂಗಳೂರು : ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳನ್ನು ಮರುನಾಮಕರಣ ಮಾಡಿ ಕಾಂಗ್ರೆಸ್ ಸರಕಾರ ಜನರನ್ನು ತಪ್ಪು...

ಮಂಗಳೂರು : ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳನ್ನು ಮರುನಾಮಕರಣ ಮಾಡಿ ಕಾಂಗ್ರೆಸ್ ಸರಕಾರ ಜನರನ್ನು ತಪ್ಪು ದಾರಿಗೆಳೆಯುತ್ತಿದೆ : ಶಾಸಕ ವೇದವ್ಯಾಸ ಕಾಮತ್.

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಗೊಂಡ ಯೋಜನೆಗಳನ್ನು ಮರುನಾಮಕರಣ ಮಾಡಿ ಜನರನ್ನು ತಪ್ಪು ದಾರಿಗೆಳೆಲಾಗುತ್ತಿದೆ ಎಂದು ಆರೋಪಿಸಿದರು.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಗಳನ್ನು ಪ್ರದರ್ಶಿಸಿ ಸರ್ಕಾರದ ಅನುದಾನಗಳ ಕುರಿತು ನಡೆಯುತ್ತಿರುವ “ಡ್ರಾಮಾ”ವನ್ನು ಖಂಡಿಸಿದರು. ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆ–2 ಅಡಿಯಲ್ಲಿ ಜಾರಿಯಾಗುತ್ತಿರುವ ₹165 ಕೋಟಿ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದದ್ದೇ ಎಂದು ಹೇಳಿದರು.

“₹165 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರವೇ ಘೋಷಿಸಿತ್ತು. ಇದರ ದಾಖಲೆಗಳು ಬಜೆಟ್ ಪ್ರತಿಗಳಲ್ಲಿ ಸ್ಪಷ್ಟವಾಗಿವೆ. ಇಂದಿನ ಕಾಂಗ್ರೆಸ್ ಸರ್ಕಾರವು ಯೋಜನೆ ಹೆಸರಿಗೆ ‘2’ ಸೇರಿಸಿ ಅದನ್ನು ತಮ್ಮ ಸಾಧನೆ ಎಂದು ಪ್ರಚಾರ ಮಾಡುತ್ತಿದೆ. ಮರುನಾಮಕರಣ ಬಿಟ್ಟರೆ ಕಾಂಗ್ರೆಸ್ ಯಾವುದೇ ಸಾಧನೆ ಮಾಡಿಲ್ಲ,” ಎಂದು ಆರೋಪಿಸಿದರು.

ಹಣಕಾಸು ಇಲಾಖೆಯ ಅನುಮತಿಯಿಲ್ಲದೆ ಶಿಲಾನ್ಯಾಸ ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಬಜೆಟ್ ಘೋಷಣೆ ಎಂದರೆ ಅದು ಹಣಕಾಸು ಇಲಾಖೆಯ ಅನುಮತಿಯೊಂದಿಗೆ ಮಾತ್ರವಾಗುತ್ತದೆ. ಮೂಲಭೂತ ಜ್ಞಾನವಿಲ್ಲದೆ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ,” ಎಂದು ತಿರುಗೇಟು ನೀಡಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಒಂದೇ ದಿನ 70ಕ್ಕೂ ಹೆಚ್ಚು ಶಿಲಾನ್ಯಾಸ ಕಾರ್ಯಕ್ರಮಗಳು ನಡೆದಿದ್ದವು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಒಂದು ಕಾರ್ಯಕ್ರಮವನ್ನೂ ಆರಂಭಿಸಲು ವಿಫಲವಾಗಿದೆ ಎಂದು ಅವರು ಹೇಳಿದರು. “ತೆರಿಗೆದಾರರ ಹಣದಲ್ಲಿ ನಡೆಯುವ ಸಾಮಾನ್ಯ ಕಾಮಗಾರಿಗಳನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ,” ಎಂದು ಟೀಕಿಸಿದರು.

ಜ್ಯೋತಿ ವೃತ್ತದ ಅಂಬೇಡ್ಕರ್ ವೃತ್ತ ವಿವಾದ : ಜ್ಯೋತಿ ವೃತ್ತದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ವಿಳಂಬವಾಗಿರುವುದರ ಬಗ್ಗೆ ಕೂಡ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ಕಚೇರಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕಾಂಗ್ರೆಸ್ ನಾಯಕರು, ನೆಲಮಟ್ಟದಲ್ಲಿ ಯೋಜನೆ ಜಾರಿಗೆ ತರಲು ವಿಫಲರಾಗಿದ್ದಾರೆ ಎಂದು ಹೇಳಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಮಾಜಿ ಮೇಯರ್ ಸುಧೀರ್ ಅವರ ಕಾಲದಲ್ಲಿ ಶಿಲಾನ್ಯಾಸ ನಡೆದಿದ್ದರೂ, ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂದು ಅವರು ಆರೋಪಿಸಿದರು. ಒಟ್ಟಾರೆ, ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಬದ್ಧತೆ ಕಾಂಗ್ರೆಸ್ ಸರ್ಕಾರದಲ್ಲಿ ಕಾಣಿಸುತ್ತಿಲ್ಲ ಎಂದು ಶಾಸಕ ಕಾಮತ್ ಅಭಿಪ್ರಾಯಪಟ್ಟರು.

RELATED ARTICLES

LEAVE A REPLY

Please enter your comment!
Please enter your name here

Most Popular