ಬೆಂಗಳೂರು : ಸಾವು ಎಷ್ಟು ಕ್ರೂರಿ. ಕಷ್ಟಪಟ್ಟು ಗಳಿಸಿದ ಸಿರಿತನ, ಸಂಪಾದಿಸಿದ ಹಣ-ಪ್ರೀತಿಯ ಮಿತ್ರರು, ಒಡಹುಟ್ಟಿದವರು ಹಾಗೂ ಹೆತ್ತವರನ್ನು ಬಿಟ್ಟು ಹೋಗಲೇಬೇಕು. ಇಂತಹ ಸಾವು ಪ್ರಾಣಿ-ಪಕ್ಷಿಗಳನ್ನು ತಪ್ಪಿಲ್ಲ-ಬಿಟ್ಟಿಲ್ಲ. ಇವು ಸಹ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಕಣ್ಣೀರು ಹಾಕದೆ ಇರುವುದಿಲ್ಲ. ಇನ್ನು ತಾಯಿ ಪ್ರೀತಿಗೆ ಸರಿ ಸಾಟಿಯೇ ಇಲ್ಲ ಎಂಬ ಮಾತಿದೆ. ಈ ಮಾತನ್ನು ಅಕ್ಷರಶಃ ನಿಜವೆಂದು ಪ್ರತಿಬಿಂಬಿಸುವಂತಹ ಹೃದಯಸ್ಪರ್ಶಿ ದೃಶ್ಯವು ನಗರದ ಹಸಿರು ಮೆಟ್ರೋ ಮಾರ್ಗದ ಮಾದಾವರ ನಿಲ್ದಾಣದಲ್ಲಿ ಕಂಡುಬಂದಿದೆ.
ಅಲ್ಲಿಂದ ಓಡಾಡುವ ಪ್ರಯಾಣಿಕರು ತಾಯಿಯಿ ಪ್ರೀತಿ, ಮಮಕಾರಕ್ಕೆ ಸಾಕ್ಷಿಯಾಗಿದ್ದಾರೆ. ಕುರುಳು ಹಿಂಡುವ ಈ ತಾಯಿ ಮಂಗನ ದೃಶ್ಯಗಳಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ವೈರಲ್ ಆಗುತ್ತಿದೆ. ಮರಿ ಮಂಗ ಸತ್ತು ವಾರವೇ ಕಳೆದಿರಬಹುದು. ಆದರೆ ಮಗುವಿನ ಸಾವಿನ ಸತ್ಯವನ್ನು ಒಪ್ಪದ ತಾಯಿ ಕೋತಿ ಅದರ ಅಸ್ಥಿಪಂಜರವನ್ನು ಹಿಡಿದು ಮೆಟ್ರೋ ನಿಲ್ದಾಣದಲ್ಲೆಲ್ಲ ಸುತ್ತಾಡುತ್ತಿದೆ. ಜೀವಂತ ಮರಿ ಮಂಗನAತೆ ಎದೆಗಪ್ಪಿಕೊಂಡು ಪ್ರೀತಿ ತೋರಿಸುತ್ತಿದೆ. ಎದೆಹಾಲು ಕುಡಿಸಲು ಯತ್ನಿಸುತ್ತಿದೆ ಹಾಗೂ ಮೈಸವರುತ್ತ ಪ್ರೀತಿ ಮಾಡುತ್ತಿರುವ ದೃಶ್ಯ ನೋಡಿದ ಪ್ರತಿಯೊಬ್ಬರೂ ಕಣ್ಣೀರು ಹಾಕಿದರು. ಮಂಗಗಳು ಸದಾ ಕಿಟಲೇ ಮಾಡುತ್ತಿರುತ್ತವೆ.
ಅವುಗಳಿಂದ ಭಾವುಕ ವರ್ತನೆ ತೀರಾ ಕಡಿಮೆ. ಅಂಥದರಲ್ಲಿ ಈ ತಾಯಿ ಕೋತಿ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಅಸ್ಥಿಪಂಜರದೊAದಿಗೆ ಜಗತ್ತಿನ ಇರುವಿಕೆ ಮರೆತು ಮಗು ಕಳೆದುಕೊಂಡು ತನ್ನದೇ ಆದ ಲೋಕದಲ್ಲಿ ಓಡಾಡುತ್ತಿದೆ. ಮೌನವಾಗಿಯೇ ರೋದಿಸುತ್ತಿದೆ. ಅದನ್ನು ಕಂಡ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಮಮ್ಮಲ ಮರುಗಿದ್ದಾರೆ.


