ವಾಷಿಂಗ್ಟನ್ : ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಯದ್ವಾತದ್ವ ಸುಂಕ ಹೇರಿದ್ದರ ವಿರುದ್ಧ ಅಲ್ಲಿನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿ ಟ್ರಂಪ್ ಸೋಲುವಂತೆ ಮಾಡಿದ್ದು ಭಾರತೀಯ ಮೂಲದ ವಕೀಲ ನೀಲ್ ಕಟ್ಯಾಲ್ ಎಂಬುದು ಬಹಿರಂಗವಾಗಿದೆ.
ಅಮೆರಿಕ ಸುಪ್ರೀಂ ಕೋರ್ಟಿನಲ್ಲಿ ನಡೆದ ಈ ಕಾನೂನು ಹೋರಾಟದಲ್ಲಿ ಟ್ರಂಪ್ ವಿರುದ್ಧ ವಾದ ಮಂಡಿಸಿದ್ದು ಅನಿವಾಸಿ ಭಾರತೀಯ ದಂಪತಿಯ ಪುತ್ರ ಕಟ್ಯಾಲ್ ಅಮೆರಿಕದಲ್ಲಿ ಪ್ರಭಾವಿ ವಕೀಲರಾಗಿದ್ದಾರೆ. ನೀಲ್ ಅವರ ತಂದೆ ಸುAದರ್ ಹಾಗೂ ತಾಯಿ ಪ್ರತಿಭಾ ಭಾರತ ಮೂಲದವರು. ಈ ಕಾನೂನು ಹೋರಾಟದಲ್ಲಿ ಮಂಚೂಣಿಯಲ್ಲಿ ಇದ್ದ 54 ವರ್ಷದ ನೀಲ್ ಕಟ್ಯಾಲ್, ಬರಾಕ್ ಒಬಾಮಾ ಆಡಳಿತದ ಅವಧಿಯಲ್ಲಿ ಅಮೆರಿಕಾದ ‘ಆಕ್ಟಿಂಗ್ ಸಾಲಿಸಿಟರ್ ಜನರಲ್’ ಆಗಿ ಸೇವೆ ಸಲ್ಲಿಸಿದ್ದರು. ಸಾಂವಿಧಾನಿಕ ವಿಷಯಗಳಲ್ಲಿ ದೇಶದ ಪ್ರಮುಖ ಕಾನೂನು ಸಲಹೆಗಾರರಾಗಿದ್ದಾರೆ. ತೆರಿಗೆ ಮತ್ತು ಸುಂಕದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಂಸತ್ತಿಗೆ ಇದೆಯೇ ಹೊರತು, ಅಮೆರಿಕಾದ ಅಧ್ಯಕ್ಷರಿಗೆ ಅಲ್ಲ ಎನ್ನುವುದನ್ನು ನೀಲ್ ಕಟ್ಯಾಲ್, ಸಮರ್ಥವಾಗಿ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


