ಮಂಗಳೂರು : ಅಕ್ರಮ ಮರಳು ಗಣಿಗಾರಿಕೆ ವಿರುದ್ಧಧ್ವನಿ ಎತ್ತಿದ ಹಿನ್ನೆಲೆ ನಗರದ ಹೊರವಲಯದ ಅಡ್ಯಾರ್ ಬಳಿ ಮರಳು ದಂಧೆಕೋರರ ಗುಂಪೊಂದು ಮಂಗಳೂರು ಪ್ರದೇಶ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಜೆರೋಮ್ ಡಿಸೋಜಾ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ‘ಬಂಟ್ವಾಳ ತಾಲ್ಲೂಕಿನ ಫರಂಗಿ ಪೇಟೆ ಬಳಿಯ ಪುದು ಗ್ರಾಮದ ಕೋಡಿಮಜಲು ಹೌಸ್ ನಿವಾಸಿ ಮೊಹಮ್ಮದ್ ಅತಾವುಲ್ಲಾ (40 ವರ್ಷ) ಹಾಗೂ ಮಾರ್ನಮಿಕಟ್ಟೆಯ ಕುಡ್ಪಾಡಿ ರಸ್ತೆ ಬಳಿಯ ನಿವಾಸಿ ತೌಸೀರ್ ಅಲಿಯಾಸ್ ಪತ್ತೊಂಜಿ ತೌಸಿರ್ (31 ವರ್ಷ) ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗುರುಪುರ ನದಿಯಲ್ಲೂ ಕೂಡ ಅಕ್ರಮ ಮರಳುಗಾರಿಕೆ ನಡೆಯುತಿತ್ತು ಆದರೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಮಾಮೂಲಿ ಪಡೆಯುತ್ತಿದೆಂದು ಸ್ಥಳೀಯರು ಆರೋಪಿಸಿ ಆಕ್ರೋಶ ಹೊರಹಾಕಿದ್ದರು. ಪಾವೂರು ಉಳಿಯ ನೇತ್ರಾವತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಡಿಸೋಜಾ ಅವರ ಮೇಲೆ 10 ರಿಂದ 15 ಜನರ ಗುಂಪು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ‘ಆರೋಪಿ ಅತಾವುಲ್ಲಾ ಅಲ್ವಿನ್ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆಗೆ ಪ್ರಚೋದನೆ ನೀಡಿದ್ದ. ಆರೋಪಿ ತೌಸಿರ್ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದ. ಆರೋಪಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 (ಉದ್ದೇಶಪೂರ್ವಕವಾಗಿ ಅವಮಾನಿಸಿ, ಸಾರ್ವಜನಿಕ ಶಾಂತಿ ಭಂಗವನ್ನುಂಟುಮಾಡುವುದು), ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ಇನ್ನೊಬ್ಬ ವ್ಯಕ್ತಿಗೆ ಹಲ್ಲೆ ನಡೆಸುವುದು), ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 109 (ಕೊಲೆಯತ್ನ) ಜೊತೆಗೆ ಸೆಕ್ಷನ್ 3(5) (ಗುಂಪು ಸೇರಿ ಹಲ್ಲೆ ನಡೆಸುವುದು) ಅಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.