Friday, March 13, 2026
Flats for sale
Homeಜಿಲ್ಲೆಮಂಗಳೂರು : ಇಂದಿನಿಂದ ವೇಣೂರಿನಲ್ಲಿ ಜಗತ್ತನ್ನು ಗೆದ್ದ ತ್ಯಾಗಮೂರ್ತಿ ಭಗವಾನ್ ಬಾಹುಬಲಿಗೆ ಮಹಾಮಸ್ತಾಕಾಭಿಷೇಕ ಸಂಭ್ರಮ.

ಮಂಗಳೂರು : ಇಂದಿನಿಂದ ವೇಣೂರಿನಲ್ಲಿ ಜಗತ್ತನ್ನು ಗೆದ್ದ ತ್ಯಾಗಮೂರ್ತಿ ಭಗವಾನ್ ಬಾಹುಬಲಿಗೆ ಮಹಾಮಸ್ತಾಕಾಭಿಷೇಕ ಸಂಭ್ರಮ.

ಮಂಗಳೂರು : ಇಂದಿನಿಂದ ಮಾರ್ಚ್ 1 ರವರೆಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿರುವ ಜಗತ್ತಿನ ಏಕೈಕ ಮಂದಸ್ಮಿತ ಗೊಮ್ಮಟನಿಗೆ ಮಹಾಮಸ್ತಾಕಾಭಿಷೇಕದ ಸಂಭ್ರಮ ನಡೆಯಲಿದೆ.

12 ವರ್ಷಗಳ ಬಳಿಕ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. 9 ದಿನಗಳ ಕಾಲ ನಡೆಯುವ ಮಹಾ ಸಂಭ್ರಮಕ್ಕೆ ಭಕ್ತ ಗಣ ಕಾತುರದಿಂದ ಕಾಯುತ್ತಿದ್ದಾರೆ. ಮಹಾಮಸ್ತಾಕಭಿಷೇಕಕ್ಕೆ ಅಂತಿಮ‌ ಹಂತದ ಸಿದ್ದತೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಚಕ್ರವರ್ತಿ ಭರತ ಭೂಮಂಡಲದ ಷಟ್‍ಖಂಡಗಳನ್ನು ಗೆದ್ದು ವಾಪಸು ಬರುತ್ತಿರುವಾಗ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಅಯೋಧ್ಯೆಯ ಬಾಗಿಲಲ್ಲಿ ಆತನ ಚಕ್ರರತ್ನ ನಿಂತುಬಿಟ್ಟಿತು. ಭರತನಿಗೆ ಆಶ್ಚರ್ಯವಾಯಿತು!! ಪುರೋಹಿತರನ್ನು ಕರೆದು ಕಾರಣವನ್ನು ಕೇಳಲು “ಭರತ ನೀನು ಜಗತ್ತನ್ನು ಏನೋ ಗೆದ್ದಿದ್ದಿಯಾ ಆದರೆ ನೀನು ಇನ್ನೂ ನಿನ್ನ ತಮ್ಮಂದಿರನ್ನು ಜಯಿಸಿಲ್ಲ”ವೆಂದು ಪುರೊಹಿತರು ಹೇಳಿದರು. ಈ ಮಾತು ಕೇಳಿದ ಕೂಡಲೇ ಭರತ ಕಪ್ಪಕಾಣಿಕೆಗಳೊಡನೆ ಬರುವಂತೆ ತನ್ನ ತಮ್ಮಂದಿರಿಗೆ ಹೇಳಿಕಳಿಸಿದ.ತಮ್ಮಂದಿರಲ್ಲಿ ಒಬ್ಬನಾದ ಬಾಹುಬಲಿಯು “ತಂದೆಯ ಹೊರತು ಇನ್ನಾರಿಗೂ ನಾನು ತಲೆ ಬಾಗುವುದಿಲ್ಲವೆಂದು, ತಂದೆಯಿಂದ ತನಗೆ ದೊರೆತ ರಾಜ್ಯವನ್ನು ಯಾರಿಗೂ ಕೊಡುವುದಿಲ್ಲವೆಂದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆಂದು” ಭರತನ ದೂತರಿಗೆ ಹೇಳಿ ಕಳುಹಿಸಿದ.

ಈ ಸುದ್ದಿಯನ್ನು ಕೇಳಿ ಕೋಪಗೊಂಡ ಭರತ ಯುದ್ಧಕ್ಕೆ ಸಿದ್ಧನಾದನು. ಆಗ ಎರಡೂ ಕಡೆಯ ಮಂತ್ರಿಗಳು ಪರ್ಯಾಲೋಚಿಸಿ ‘ಇವರಿರ್ವರ್ ಅರಸುಮಕ್ಕಳಪ್ರೊಡೆ ಚರಮದೇಹಧಾರಿಗಳ್, ಇವರ ಯುದ್ಧವೆಂಬುದು ಅತಿಕ್ರೂರ ಯುದ್ಧದಂತೆ ಸಕಲ ಪ್ರಜಾ ವಿನಾಶಕರಮಲ್ಲದೆ ಪೆರತಲ್ಲು, ಉಭಯ ಚತುರಂಗ ಬಲ ಯುದ್ಧದೊಳಲ್ಲದೆ ಸೋಲ ಗೆಲ್ಲಮೆಂಬುದಿಲ್ಲ. ಸಮಸ್ತ ಜನ ಸಂಹರಣ ಕಾರಣಮಪ್ಪ ರಣದೊಳ್ ಏವಂದಪಪದು’ ಎಂಬ ನಿಲುವಿಗೆ ಬಂದು, ಸಮಸ್ತ ಸೈನ್ಯ ತಟಸ್ಥವಾಗಿದ್ದು ಭರತ-ಬಾಹುಬಲಿ ಇಬ್ಬರೇ ಧರ್ಮಯುದ್ಧ ಮಾಡುವಂತೆ ಸೂಚಿಸುತ್ತಾರೆ. ಆದ್ದರಿಂದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯುತ್ತದೆ.

ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವಂತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆಂದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊಂದಿದ ಭರತನು ಬಾಹುಬಲಿಯ ಮೇಲೆ ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಗೆ ಪ್ರದಕ್ಷಿಣೆ ಮಾಡಿ ಅವನ ಬಲಗಡೆ ಬಂದು ನಿಂತಿತು. ಬಾಹುಬಲಿ ವಿಜಯಿಯಾದನು. ಎಲ್ಲರೂ ಜೈಕಾರ ಹಾಕಿದರು.

ರಾಜ್ಯ, ಸಂಪತ್ತಿಗಾಗಿ ತನ್ನ ಒಡಹುಟ್ಟಿದ ಅಣ್ಣನೊಂದಿಗೆ ಯುದ್ಧಕ್ಕೆ ನಿಂತ ತನ್ನ ನಡೆಯ ಬಗ್ಗೆ ಬಾಹುಬಲಿಗೆ ಅಸಹ್ಯ ಹುಟ್ಟುತ್ತದೆ. ಬಾಹುಬಲಿ, ಯುದ್ಧದಲ್ಲಿ ಗೆದ್ದರೂ, ರಾಜ್ಯಕ್ಕಾಗಿ ಅಣ್ಣ ಮಾಡಲೆಳಸಿದ ಅಕಾರ್ಯವನ್ನು ನೋಡಿ ವೈರಾಗ್ಯ ತಾಳುತ್ತಾನೆ. ಭೂಮಿ-ರಾಜ್ಯಗಳಿಗಾಗಿ ಅಣ್ಣತಮ್ಮಂದಿರೇ ಕಿತ್ತಾಡಿಕೊಂಡೆವಲ್ಲ! ತೀರ್ಥಂಕರನ ಮಗ ಭರತ. ಅವನ ಮನಸ್ಸಿನೊಳಗೂ ತಮ್ಮನನ್ನು ಚಕ್ರದಿಂದ ತುಂಡರಿಸಬೇಕು ಎಂಬ ಭಾವನೆಯನ್ನು ಮೂಡಿಸಿಬಿಟ್ಟಿತಲ್ಲ ಈ ಮಣ್ಣಿನಾಸೆ! ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತಲೇ ಬಾಹುಬಲಿ ವಿರಾಗಿಯಾಗಿಬಿಟ್ಟ. ಪಶ್ಚಾತ್ತಾಪದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಬಾಹುಬಲಿ, ಬೇರೆ ದಾರಿ ಕಾಣದೆ ತನ್ನೆಲ್ಲ ಸಂಪತ್ತು, ರಾಜ್ಯವನ್ನೂ ಅಣ್ಣನ ಕೈಗೊಪ್ಪಿಸಿ ತಪ್ಪಸ್ಸಿನ ಕಡೆ ಮುಖ ಮಾಡಿದ.

ಬಹುಕಾಲ ತಪಸ್ಸು ಆಚರಿಸಿದರೂ ಬಾಹುಬಲಿಗೆ ಕೈವಲ್ಯಜ್ಞಾನವನ್ನು ಪಡೆಯಲಾಗಲಿಲ್ಲ. ಇದಕ್ಕೆ ತಾನು ತನ್ನದೇ ಭೂಮಿಯಲ್ಲಿ ನಿಂತಿರುವೆನೆಂಬ ಅಹಂಭಾವ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಬಾಹುಬಲಿಯು ಭರತನ ಬಳಿಗೆ ಹೋಗಿ ಭೂಮಿಯನ್ನು ಬೇಡಿ ದಾನ ಪಡೆದು ತಪ್ಪಸ್ಸನ್ನಾಚರಿಸಿದನು. ಬಾಹುಬಲಿ ತನ್ನ ಪಕ್ಕದಲ್ಲಿ ಬೆಳೆದಿರುವ ಇರುವೆಗಳ ಬೆಟ್ಟಗಳಿಂದ, ಕಾಲಬುಡದಲ್ಲಿ ಬೆಳೆದಿರುವ ಹುತ್ತಗಳ ರಾಶಿಯಿಂದ, ಸರ್ಪಗಳಿಂದ ಹೆದರದೆ, ತನ್ನ ಭುಜದವವರೆಗೆ ಬೆಳೆದಿರುವ ಬಳ್ಳಿಗಳಿಂದ ವಿಚಲಿತನಾಗದೆ ಕಾಯೋತ್ಸರ್ಗ ಭಂಗಿಯಲ್ಲಿ ಧ್ಯಾನ ಮಾಡಿ ಬ್ರಹ್ಮಾಂಡದ ಬಗ್ಗೆ ಸಂಪೂರ್ಣ ಜ್ಞಾನವಾದ ಕೈವಲ್ಯಜ್ಞಾನವನ್ನು ಪಡೆದು ತ್ಯಾಗದಿಂದ ಜಗತ್ತನ್ನು ಗೆದ್ದ ಭಗವಾನ್ ಬಾಹುಬಲಿಯಾದ ಎಂಬುದು ಚರಿತ್ರೆ.

ಗೊಮ್ಮಟೇಶ್ವರನಿಗೆ ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಶ್ರೀ ಗಂಧ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ. ಮೊದಲ ಮೂರು ದಿನ 108, ಬಳಿಕ 216 ಮತ್ತು 504 ಸೇರಿದಂತೆ ಕೊನೆಯ ದಿನದಂದು 1008 ಕಲಶಾಭಿಷೇಕ ಮಾಡಲಾಗುತ್ತದೆ. ಯುಗಳಮುನಿಗಳಾದ ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಅಮರಕೀರ್ತಿ ಮುನಿಮಹಾರಾಜರು ವೇಣೂರು ಪುರಪ್ರವೇಶ ಮಾಡಿದಾಗ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಭಕ್ತದಿಗಳು ಆಶೀರ್ವಾದ ಪಡೆಯುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular