ಮಣಿಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಣಿಪುರದ ಥೌಬಾಲ್‌ನಿಂದ ಭಾನುವಾರ ಸಂಜೆ ಆರಂಭಗೊಂಡಿತು . ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಈ ಯಾತ್ರೆ15 ರಾಜ್ಯಗಳಲ್ಲಿ 6500 ಕಿಲೋಮೀಟರ್ ಸಂಚರಿಸಿ, 100 ಲೋಕಸಭಾ ಕ್ಷೇತ್ರಗಳನ್ನು ಮುಟ್ಟಿ ಮುಂಬೈ ತಲುಪಲಿದೆ. ನಿರುದ್ಯೋಗದ ವಿರುದ್ಧ ದನಿ ಎತ್ತಿ, ಆರ್ಥಿಕ ನ್ಯಾಯ ತರಲು ಮತ್ತು ಸಾಮಾಜಿಕ ಸೌಹಾರ್ದತೆ ಮೂಡಿಸಲು ಈ ಹೋರಾಟ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಇಂಫಾಲದ ಐತಿಹಾಸಿಕ ಅರಮನೆ ಮೈದಾನದಿಂದ ಯಾತ್ರೆಯನ್ನು ಆರಂಭಿಸಬೇಕು ಎAದು ಕಾಂಗ್ರೆಸ್ ಉದ್ದೇಶಿಸಿತ್ತು. ಆದರೆ ಮಣಿಪುರ ಕಳೆದ ಎಂಟು ತಿಂಗಳಿನಿಂದ ಹಿಂಸೆಯ ತೆಕ್ಕೆಯಲ್ಲಿ ಸಿಕ್ಕಿ ನಲುಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂಫಾಲ್‌ನಿಂದ 50 ಕಿಲೋಮೀಟರ್ ದೂರದಲ್ಲಿರುವ ಥೌಬಾಲ್‌ನಿಂದ ಯಾತ್ರೆಗೆ ಅನುಮತಿ ನೀಡಲಾಗಿತ್ತು.
ಥೌಬಾಲ್ ಜಿಲ್ಲೆಯ ಖೊಂಗ್‌ಜಾಮ್ ಯುದ್ಧ ಸ್ಮಾರಕಕ್ಕೆ ಭೇಟಿ ಗೌರವ ಸಲ್ಲಿಸಿದ ನಂತರ ರಾಹುಲ್ ತಮ್ಮ ಯಾತ್ರೆಯನ್ನು ಆರಂಭಿಸಿದರು. ಕಾರ್ಯಕ್ರಮದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್, ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಸಚಿನ್ ಪೈಲಟ್, ವಿವಿಧ ರಾಜ್ಯಗಳ ಪಕ್ಷದ ನಾಯಕರು ಹಾಜರಿದ್ದರು.
ಕಳೆದ ವರ್ಷ ನಡೆಸಿದ್ದ ಯಾತ್ರೆ ದಕ್ಷಿಣದಿಂದ ಉತ್ತರಕ್ಕೆ ನಡೆದಿದ್ದು, ಈ ಬಾರಿಯ ಯಾತ್ರೆ ಪೂರ್ವದಿಂದ ಪಶ್ಚಿಮಕ್ಕೆ ಸಾಗಲಿದೆ. ಈ ಯಾತ್ರೆ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಾಣಸಿ ಸೇರಿದಂತೆ, 355 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಇವುಗಳ ಪೈಕಿ 2019ರ ಚುನಾವಣೆಯಲ್ಲಿ ಬಿಜೆಪಿ 236 ಸ್ಥಾನಗಳನ್ನು ಗೆದ್ದಿದ್ದು, 14 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಸಂಸದರಿದ್ದಾರೆ.


