ಬೆಳಗಾವಿ : ವಿಧಾನಸೌಧದಲ್ಲಿರುವ ವೀರ ಸಾವರಕರ್ ಭಾವಚಿತ್ರ ತೆರವುಗೊಳಿಸುವ ವಿದ್ಯಮಾನಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.ಕಿತ್ತು ಬಿಸಾಡುವುದು ನನ್ನ ಸಂಸ್ಕೃತಿಯಲ್ಲ, ಜೋಡಿಸುವುದು ನನ್ನ ಸಂಸ್ಕೃತಿ, ಜೋಡಿಸುವ ಸಂಸ್ಕೃತಿಯಿಂದ ನಾನು ಬಂದಿರುವೆ ಎಂದು ಹೇಳಿದ್ದಾರ
ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರವಿದ್ದರೆ ನಾನೇ ಮೊದಲು ತೆಗೆದು ಹಾಕುವೆ' ಎಂಬ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಉತ್ತರಿಸಿದ ಸಭಾಧ್ಯಕ್ಷರು,ಕಿತ್ತು ಬಿಸಾಡುವುದು ನಮ್ಮ ಹಾಗೂ ನನ್ನ ಸಂಸ್ಕೃತಿಯಲ್ಲ, ಯಶವಂತಪುರದ ಫ್ಲೈ ಓವರ್ ಇದೆ, ಅದರ ಕೆಳಗಡೆ ಓಡಾಡುವುದಿಲ್ಲವೇ? ಎಂದು ಪ್ರಶ್ನಿಸಿದರು. ಜನರ ಸಮಸ್ಯೆಗಳನ್ನು, ಕ್ಷೇತ್ರದ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸುವುದು ಶಾಸಕರ ಕೆಲಸ, ಅದಕ್ಕೆ ಸೂಕ್ತವಾದ ಉತ್ತರ ನೀಡಿ ಸ್ಪಂದಿಸುವುದು ಮಂತ್ರಿಗಳ ಕೆಲಸ ಇದನ್ನು ಅವರು ಮೊದಲು ಸರಿಯಾಗಿ ನಿರ್ವಹಿಸಲಿ ಎಂದರು.
ಜಂಟಿ ಅಧಿವೇಶನಕ್ಕೆ ಸಲಹೆ: ಬೆಳಗಾವಿ ಸುವರ್ಣ ಸೌಧದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಜಂಟಿ ಅಧಿವೇಶನ ನಡೆಸುವವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸುವರ್ಣ ಸೌಧದಲ್ಲಿ ಆಡಳಿತ ಚಟುವಟಿಕೆಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಹೀಗಾಗಿ ರಾಜ್ಯಪಾಲರ ಸಮ್ಮುಖದಲ್ಲಿ ಜಂಟಿ ಅಧಿವೇಶನ ಇಲ್ಲಿ ನಡೆದಿಲ್ಲ, ಹೀಗಾಗಿ ಈ ಅಧಿವೇಶನ ನಡೆಸುವಂತೆ ಸಲಹೆ ನೀಡಲಾಗಿದೆ, ಬರುವ ವರ್ಷಗಳಲ್ಲಿ ಈ ಆಶಯ ಈಡೇರುವ ಸಾಧ್ಯತೆ ಇದೆ ಎಂದರು.
ಸುವರ್ಣಸೌಧ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸಚಿವಾಲಯ, ಕಚೇರಿಗಳು ಸ್ಥಾಪನೆಯಾಗಬೇಕು ಎಂಬುದು ನಮ್ಮ ಭಾವನೆ ಕೂಡಾ ಹೌದು, ಸಚಿವ ಸಂಪುಟದ ಸಭೆಗಳನ್ನು ನಡೆಸುವಂತೆಯೂ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಕಚೇರಿ ಸ್ಥಳಾಂತರಕ್ಕೂ ಪತ್ರ ಬರೆಯಲಾಗಿದೆ. ಆದರೆ ಐಎಎಸ್ ಅಧಿಕಾರಿಗಳು ಈ ವಿಷಯವಾಗಿ ಅಡ್ಡ ದಾರಿ ಕಂಡುಕೊAಡು ಸರ್ಕಾರಕ್ಕೆ ಹೇಳುತ್ತಾರೆ, ಒಂದು ರೀತಿ ದೇವರು ಕೊಟ್ಟರೂ ಪೂಜಾರಿ ಕೊಡದಂತಹ ಪರಿಸ್ಥಿತಿ ಎಂದು ಹೊರಟ್ಟಿ ವಿಶ್ಲೇಷಿಸಿದರು.
ಮಹಾರಾಷ್ಟç, ಹಿಮಾಚಲದಲ್ಲಿರುವ ಸೌಧಗಳನ್ನು ಹಾಗೂ ಅಲ್ಲಿ ಕಾರ್ಯಚಟುವಟಿಕೆಗಳನ್ನು ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿ ಇಲ್ಲಿಯೂ ಅಳವಡಿಸಿ, ಮುಂದೆ ಅವರೇ ನಮ್ಮಲ್ಲಿ ಬಂದು ನೋಡುವ ನಿಟ್ಟಿನಲ್ಲಿ ಸುವರ್ಣ ಸೌಧದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಾಗುವುದು, ಸುವರ್ಣ ಸೌಧ ಕೇವಲ ಅಧಿವೇಶನಕ್ಕೆ ಸೀಮಿತವಾದ ಕಟ್ಟಡವಲ್ಲ, ಇದು ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತ ಎಂದರು.


