ಹಾಸನ : ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡಕುಮರಿ ಸಮೀಪ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದೆ.



ಈ ಹಿನ್ನೆಲೆ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ಇಂದು ಸಂಚರಿಸಬೇಕಿದ್ದ ಎಲ್ಲಾ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಘಟನಾ ಸ್ಥಳದಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ಮಣ್ಣು ತೆರವು ಕಾರ್ಯವನ್ನು ಆರಂಭಿಸಿದ್ದು, ಹಳಿ ಸುರಕ್ಷತಾ ಪರಿಶೀಲನೆ ಬಳಿಕವೇ ರೈಲು ಸಂಚಾರ ಪುನರಾರಂಭವಾಗಲಿದೆ.
ರೈಲುಗಳ ರದ್ದತಿಯಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಡುರಾತ್ರಿಯಿಂದಲೇ ವಿವಿಧ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಾಗಿ ಹರಸಾಹಸ ಪಡುತ್ತಿದ್ದಾರೆ.
ನಿಲುಗಡೆಗೊಂಡಿರುವ ಪ್ರಮುಖ ರೈಲುಗಳು:
ಬೆಂಗಳೂರು–ಮುರಡೇಶ್ವರ ಎಕ್ಸ್‌ಪ್ರೆಸ್ – ಹಾಸನ
ಬೆಂಗಳೂರು–ಕೋಜಿಕೋಡ್ ಎಕ್ಸ್‌ಪ್ರೆಸ್ – ಹಾಸನ
ವಿಜಯಪುರ–ಮಂಗಳೂರು ಎಕ್ಸ್‌ಪ್ರೆಸ್ – ಹಾಸನ
ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್ – ಸಕಲೇಶಪುರ
ಮುರಡೇಶ್ವರ–ಬೆಂಗಳೂರು ಎಕ್ಸ್‌ಪ್ರೆಸ್ – ಸುಬ್ರಹ್ಮಣ್ಯ
ಮಂಗಳೂರು–ವಿಜಯಪುರ ಎಕ್ಸ್‌ಪ್ರೆಸ್ – ಸುಬ್ರಹ್ಮಣ್ಯ
ಕೋಜಿಕೋಡ್–ಬೆಂಗಳೂರು ಎಕ್ಸ್‌ಪ್ರೆಸ್ – ಪುತ್ತೂರು
ರೈಲುಗಳ ರದ್ದತಿ ಹಾಗೂ ನಿಲುಗಡೆ ಕುರಿತು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದು, ಹಳಿ ದುರಸ್ತಿ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ಎಲ್ಲಾ ರೈಲು ಸಂಚಾರ ಸ್ಥಗಿತವಾಗಿರಲಿದೆ.


