ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದ ಪರಿಣಾಮ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ 8.4 ಮೀಟರ್ ತಲುಪಿದ್ದು, 8.5 ಮೀಟರ್ ಅಪಾಯದ ಮಟ್ಟದ ಸಮೀಪ ಹರಿಯುತ್ತಿದೆ. ಮಳೆ ಮುಂದುವರಿದರೆ ನದಿ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ.














ಭಾರೀ ಮಳೆಯ ಜೊತೆಗೆ AMR ಹಾಗೂ MRPL ನೀರಕಟ್ಟೆ ಡ್ಯಾಂಗಳಿಂದಲೂ ನೀರು ಹೊರಬಿಡಲಾಗುತ್ತಿರುವುದರಿಂದ ನದಿಯ ಹರಿವು ಮತ್ತಷ್ಟು ಹೆಚ್ಚಾಗಿದೆ. ಇದರ ಪರಿಣಾಮ ಪಾಣೆಮಂಗಳೂರು, ಆಲಡ್ಕ, ಕೋಟೆಕಣಿ, ಜಕ್ರಿಬೆಟ್ಟು, ಕಂಚಿಕಾರಪೇಟೆ, ಬಸ್ತಿಪಡ್ಪು, ನಾವೂರು, ಅಜಿಲಮೊಗರು, ಬೋಗೋಡಿ, ನಂದಾವರ, ಗೂಡಿನಬಳಿ, ಅಕ್ಕರಂಗಡಿ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಅಂಗಡಿ-ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕೋಟೆಕಣಿ ಪ್ರದೇಶದಲ್ಲಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಂಟ್ವಾಳ–ಬೆಳ್ತಂಗಡಿ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ. ನೇತ್ರಾವತಿ ತಟದ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನೊಂದೆಡೆ, ಬೆಳ್ತಂಗಡಿ ತಾಲೂಕಿನ ಸವಣಾಲು ಪ್ರದೇಶದಲ್ಲಿ ರಸ್ತೆ ಬದಿಯ ಗುಡ್ಡ ಕುಸಿದಿದ್ದು, ಮುಂಡಾಜೆ ಭಾಗದಲ್ಲಿ ತೋಟಗಳಿಗೆ ಪ್ರವಾಹದ ನೀರು ನುಗ್ಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಳ್ತಂಗಡಿ ಹಾಗೂ ಉಜಿರೆ ಭಾಗಗಳಿಗೆ ಎನ್ಡಿಆರ್ಎಫ್ ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ಮಂಗಳೂರು ಗಡಿಭಾಗದ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಭಾರೀ ಮಳೆಯಿಂದ ಜಲಪ್ರಳಯ ಉಂಟಾಗಿದ್ದು, ನೀಲೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆ-ಅಂಗಡಿಗಳಿಗೆ ನೀರು ನುಗ್ಗಿದೆ. ಸ್ಥಳೀಯ ಆಡಳಿತ ದೋಣಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.


