ವಿಟ್ಲ : ಅಕ್ರಮ ಜಾನುವಾರು ಸಾಗಾಟ ಹಾಗೂ ಕಳ್ಳಸಾಗಣೆ ಜಾಲವನ್ನು ವಿಟ್ಲ ಪೊಲೀಸ್ ಠಾಣೆ ಪೊಲೀಸರು ಭೇದಿಸಿದ್ದು, 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಬಜರಂಗ ದಳ ಕಲ್ಲಡ್ಕ ಘಟಕ ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಬಳಸಲಾಗುತ್ತಿದೆ ಎನ್ನಲಾದ ಸ್ವಿಫ್ಟ್ ಕಾರನ್ನು ಪೊಲೀಸರು ತಡೆದ ವೇಳೆ, ಆರೋಪಿಗಳು ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರ ಮೇಲೆಯೇ ಕಾರು ಹರಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬಳಿಕ ಪೊಲೀಸರು ನಡೆಸಿದ ಮುಂದುವರಿದ ಕಾರ್ಯಾಚರಣೆಯಲ್ಲಿ, ಜಾನುವಾರುಗಳನ್ನು ಅಕ್ರಮವಾಗಿ ಇರಿಸಲಾಗಿದ್ದ ಎನ್ನಲಾದ ಮನೆಯೊಂದರ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಎಲ್ಲಿಂದ ತರಲಾಗಿತ್ತು ಹಾಗೂ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.


