Thursday, June 18, 2026
Flats for sale
Homeರಾಜ್ಯಮೈಸೂರು : ಮೂರು ತಿಂಗಳಿಂದ ವೃದ್ಧಾಪ್ಯ, ವಿಧವಾ ವೇತನ ಬಂದ್ : ತಹಸೀಲ್ದಾರ್ ಕಚೇರಿ ಮೆಟ್ಟಿಲೇರಿದ...

ಮೈಸೂರು : ಮೂರು ತಿಂಗಳಿಂದ ವೃದ್ಧಾಪ್ಯ, ವಿಧವಾ ವೇತನ ಬಂದ್ : ತಹಸೀಲ್ದಾರ್ ಕಚೇರಿ ಮೆಟ್ಟಿಲೇರಿದ 30 ಕ್ಕೂ ಹೆಚ್ಚು ಫಲಾನುಭವಿಗಳು.

ಮೈಸೂರು : ಆದಾಯ ಹೆಚ್ಚಳವಾಗಿದೆ ಎಂಬ ಕಾರಣ ನೀಡಿ 30ಕ್ಕೂ ಹೆಚ್ಚು ಮಂದಿಯ ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನವನ್ನು ಸ್ಥಗಿತಗೊಳಿಸಿರುವುದಾಗಿ ಆರೋಪಿಸಿ ಫಲಾನುಭವಿಗಳು ತಹಸೀಲ್ದಾರ್ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕೇತಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೃದ್ಧರು ಹಾಗೂ ವಿಧವಾ ವೇತನ ಫಲಾನುಭವಿಗಳ ಪ್ರಕಾರ, ಕಳೆದ ಮೂರು ತಿಂಗಳಿನಿಂದ ಪಿಂಚಣಿ ಹಣ ಜಮೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ವಾರ್ಷಿಕ ಆದಾಯ ಮಿತಿಗಿಂತ ಹೆಚ್ಚಾಗಿದೆ ಎಂಬ ಕಾರಣ ನೀಡಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಆದರೆ, ನಮ್ಮ ಹೆಸರಲ್ಲಿ ಯಾವುದೇ ಜಮೀನು ಇಲ್ಲ. ನಮ್ಮ ಮಕ್ಕಳು ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ನೀಡುವ ಪಿಂಚಣಿಯೇ ಬದುಕಿನ ಆಧಾರವಾಗಿದ್ದು, ಅದನ್ನು ಸ್ಥಗಿತಗೊಳಿಸಿರುವುದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳು ಕೇವಲ ದಾಖಲೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳದೆ, ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಕುಟುಂಬಗಳ ನೈಜ ಆರ್ಥಿಕ ಸ್ಥಿತಿಯನ್ನು ಅವಲೋಕಿಸಿ, ಸ್ಥಗಿತಗೊಳಿಸಿರುವ ಪಿಂಚಣಿಯನ್ನು ತಕ್ಷಣ ಮರು ಆರಂಭಿಸಬೇಕು ಎಂದು ಫಲಾನುಭವಿಗಳು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಗ್ರಾಮಸ್ಥರು, ಅರ್ಹ ಫಲಾನುಭವಿಗಳ ಪಿಂಚಣಿ ಮರು ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular