ಮಂಡ್ಯ : ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ವಿಚಿತ್ರ ಪ್ರೇಮ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆ ಹಾಗೂ ಇಬ್ಬರು ಮಕ್ಕಳ ತಂದೆಯಾಗಿರುವ ವಿವಾಹಿತ ವ್ಯಕ್ತಿಯೊಬ್ಬರು ಮನೆ ಬಿಟ್ಟು ತೆರಳಿ ಮದುವೆಯಾಗಿರುವ ಘಟನೆ ನಡೆದಿದೆ.
ಶಿಕಾರಿಪುರ ಗ್ರಾಮದ ಪವಿತ್ರ ಮತ್ತು ಯೇಸುದಾಸ್ ಎಂಬವರು ಕಳೆದ ವಾರದಿಂದ ನಾಪತ್ತೆಯಾಗಿದ್ದರು. ಪವಿತ್ರ ಅವರಿಗೆ ಹಲವು ವರ್ಷಗಳ ಹಿಂದೆ ವಿಜಯ್ ಕುಮಾರ್ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದೇ ರೀತಿ ಯೇಸುದಾಸ್ ಅವರಿಗೂ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಮಾಹಿತಿಯ ಪ್ರಕಾರ, ಹೋಟೆಲ್ ನಡೆಸುತ್ತಿದ್ದ ಪವಿತ್ರ ಹಾಗೂ ಯೇಸುದಾಸ್ ನಡುವೆ ಸ್ನೇಹ ಬೆಳೆದು ಬಳಿಕ ಪ್ರೇಮ ಸಂಬಂಧಕ್ಕೆ ತಿರುಗಿದೆ ಎನ್ನಲಾಗಿದೆ. ಕಳೆದ ವಾರ ಇಬ್ಬರೂ ಮನೆ ಬಿಟ್ಟು ತೆರಳಿದ್ದು, ಬಳಿಕ ತಾವು ಮದುವೆಯಾಗಿರುವುದಾಗಿ ಫೋಟೋಗಳನ್ನು ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾರೆ.
ಪವಿತ್ರ ಅವರು ತಮ್ಮ ಪತಿ ವಿಜಯ್ ಕುಮಾರ್ ಅವರಿಗೆ ಮದುವೆಯ ಫೋಟೋ ಕಳುಹಿಸಿದ್ದರೆ, ಯೇಸುದಾಸ್ ಕೂಡ ತಮ್ಮ ಪತ್ನಿಗೆ ಪವಿತ್ರ ಜೊತೆಗಿನ ಮದುವೆ ಫೋಟೋ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪವಿತ್ರ ಅವರ ಪತಿ ವಿಜಯ್ ಕುಮಾರ್ ಹಾಗೂ ಯೇಸುದಾಸ್ ಅವರ ಪತ್ನಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಕ್ಕಳ ಹಿತದೃಷ್ಟಿಯಿಂದ ಇಬ್ಬರನ್ನೂ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


