ಮಂಡ್ಯ : ಆತ್ಮಹತ್ಯೆ ಯತ್ನಗಳ ಹಾಟ್‌ಸ್ಪಾಟ್ ಆಗಿ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಮತ್ತೆ ಸುದ್ದಿಯಲ್ಲಿದೆ. ದಿನೇ ದಿನೇ ಸೇತುವೆ ಮೇಲಿಂದ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ನಿನ್ನೆ ರಾತ್ರಿ ಮೈಸೂರಿನ ಮೇಟಗಳ್ಳಿ ನಿವಾಸಿ ಶಿವಕುಮಾರ್ ಎಂಬಾತ ಸೇತುವೆ ಮೇಲಿಂದ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನದಿಗೆ ಬೀಳುವ ವೇಳೆ ಪಕ್ಕದ ಬಂಡೆಗೆ ಬಿದ್ದು ಗಾಯಗೊಂಡು ನರಳಾಡುತ್ತಿದ್ದ ವೇಳೆ ಆತನ ಚೀರಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗಾಯಾಳುವನ್ನು ರಕ್ಷಿಸಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಿವಕುಮಾರ್‌ಗೆ ಚಿಕಿತ್ಸೆ ಮುಂದುವರಿದಿದೆ.ಕಳೆದ ಒಂದು ವಾರದಲ್ಲಿ ಇದೇ ಸೇತುವೆ ಮೇಲಿಂದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಶ್ರೀರಂಗಪಟ್ಟಣ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.


