Wednesday, July 8, 2026
Homeರಾಜ್ಯಮಂಡ್ಯ : ಮಂಡ್ಯದಲ್ಲಿ ಪುಂಡರ ಅಟ್ಟಹಾಸ ಮುಂದುವರಿಕೆ : ಫ್ಲೈ ಬಸ್ ಚಾಲಕ-ನಿರ್ವಾಹಕನ ಮೇಲೆ ಹಲ್ಲೆ,...

ಮಂಡ್ಯ : ಮಂಡ್ಯದಲ್ಲಿ ಪುಂಡರ ಅಟ್ಟಹಾಸ ಮುಂದುವರಿಕೆ : ಫ್ಲೈ ಬಸ್ ಚಾಲಕ-ನಿರ್ವಾಹಕನ ಮೇಲೆ ಹಲ್ಲೆ, ವಿಡಿಯೋ ವೈರಲ್.

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮತ್ತೆ ಪ್ರಶ್ನೆಗಳು ಮೂಡಿಸುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ನಡೆದ ಮೂರನೇ ಹಲ್ಲೆ ಪ್ರಕರಣ ಇದಾಗಿದ್ದು, ಫ್ಲೈ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಪುಂಡರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳುತ್ತಿದ್ದ ಫ್ಲೈ ಬಸ್ ಮಂಡ್ಯದಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ, ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಕೆಲ ಯುವಕರು ಬಸ್ ಅನ್ನು ಅಡ್ಡಗಟ್ಟಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.

ಆರೋಪಿಗಳಲ್ಲಿ ಕೆಲವರು ಮದ್ಯದ ಅಮಲಿನಲ್ಲಿ ಒನ್‌ವೇ ರಸ್ತೆಯಲ್ಲಿ ಬಂದು, ಬಸ್ ಚಾಲಕ ವಿನೋದ್ ಹಾಗೂ ನಿರ್ವಾಹಕ ಈರಣ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿದಾಗಲೂ ಆರೋಪಿಗಳು ಪೊಲೀಸರ ವಿರುದ್ಧವೂ ಅವಾಚ್ಯ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. “ನಾನು ಮಂಡ್ಯ ಲೋಕಲ್” ಎಂದು ಬೆದರಿಕೆ ಹಾಕುತ್ತಾ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದರೂ ಇದೀಗ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಟ್ರಕ್ ಚಾಲಕನ ಮೇಲೆ ಗುಂಡಿನ ದಾಳಿ ಹಾಗೂ ಮದ್ದೂರು ಸಮೀಪ ರಾಡ್‌ನಿಂದ ಹಲ್ಲೆ ನಡೆದ ಘಟನೆಗಳ ಬೆನ್ನಲ್ಲೇ ಈ ಪ್ರಕರಣವೂ ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪ್ರಕರಣ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular