Thursday, June 25, 2026
Homeರಾಜ್ಯಮಂಡ್ಯ : ಕಾವೇರಿಯ ಮುತ್ತತ್ತಿಯಲ್ಲಿ ಫೋಟೋ ತೆಗೆಯಲು ಹೋಗಿ ಒಂದೇ ಕುಟುಂಬದ ಐವರು ಜಲಸಮಾಧಿ.

ಮಂಡ್ಯ : ಕಾವೇರಿಯ ಮುತ್ತತ್ತಿಯಲ್ಲಿ ಫೋಟೋ ತೆಗೆಯಲು ಹೋಗಿ ಒಂದೇ ಕುಟುಂಬದ ಐವರು ಜಲಸಮಾಧಿ.

ಮಂಡ್ಯ : ಫೋಟೋ ತೆಗೆಯುವ ವೇಳೆ ಕಾಲು ಜಾರಿ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತರನ್ನು ಶ್ವೇತಾ (38), ಚೈತ್ರ (20), ವಿಜಯಮ್ಮ (50), ಪ್ರಿಯಾಂಕಾ (28) ಹಾಗೂ ಕಾರು ಚಾಲಕ ಮಹೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮೂಲತಃ ಚನ್ನಪಟ್ಟಣದವರಾಗಿದ್ದು, ಕುಟುಂಬ ಸದಸ್ಯರೊಂದಿಗೆ ಮುತ್ತತ್ತಿಯ ಮುತ್ತೆತ್ತರಾಯ ದೇವಾಲಯಕ್ಕೆ ಭೇಟಿ ನೀಡಿದ್ದರು.

ದೇವರ ದರ್ಶನ ಹಾಗೂ ಪೂಜೆ ಮುಗಿಸಿದ ಬಳಿಕ ಸಂಜೆ ಸುಮಾರು 4.45ರ ವೇಳೆಗೆ ಕಾವೇರಿ ನದಿ ತಟಕ್ಕೆ ತೆರಳಿದ ಕುಟುಂಬಸ್ಥರು ಫೋಟೋ ತೆಗೆಯಲು ನೀರಿಗೆ ಇಳಿದಿದ್ದರು. ಈ ವೇಳೆ ವಿಜಯಮ್ಮ ಅವರು ನೀರಿನಲ್ಲಿ ಮುಳುಗತೊಡಗಿದಾಗ ಅವರನ್ನು ರಕ್ಷಿಸಲು ಉಳಿದವರು ಮುಂದಾಗಿದ್ದು, ಒಬ್ಬರ ನಂತರ ಒಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ವೇಳೆ ಹೋಂ ಗಾರ್ಡ್ ಸಿಬ್ಬಂದಿ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ, ನೀರಿನ ಆಳ ಕಡಿಮೆ ಇದೆ ಎಂದು ಭಾವಿಸಿ ಕುಟುಂಬಸ್ಥರು ನದಿಗೆ ಇಳಿದಿದ್ದರು ಎನ್ನಲಾಗಿದೆ. ಕುಟುಂಬದ ಮುಖ್ಯಸ್ಥ ರವಿ ಅವರು ಕೂಡ ರಕ್ಷಣೆಗೆ ಧಾವಿಸಿದ್ದರೂ, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ರವಿ ಹಾಗೂ ನಾಲ್ಕು ವರ್ಷದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬದುಕುಳಿದ ರವಿ ಹೇಳಿದ್ದೇನು?

“ಕಬ್ಬಾಳಮ್ಮ ದೇವರ ದರ್ಶನ ಮುಗಿಸಿ ಮುತ್ತತ್ತಿಗೆ ಬಂದಿದ್ದೆವು. ಬಳಿಕ ಸ್ನಾನ ಮಾಡಲು ನದಿಗೆ ಹೋದೆವು. ಈ ವೇಳೆ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದ ಬಳಿಕ ಅವರನ್ನು ರಕ್ಷಿಸಲು ಉಳಿದವರು ಮುಂದಾದರು. ಅವರನ್ನು ಹೊರಕ್ಕೆ ಎಳೆಯಲು ನಾನು ಕೂಡ ಹೋಗಿದ್ದೆ. ಆಗ ನಾನು ಸಹ ಮುಳುಗುತ್ತಿದ್ದಾಗ ಸ್ಥಳೀಯರು ನನ್ನನ್ನು ರಕ್ಷಿಸಿದರು,” ಎಂದು ಬದುಕುಳಿದ ರವಿ ತಿಳಿಸಿದ್ದಾರೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular