ಮಂಗಳೂರು : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕುಖ್ಯಾತ ಅಂತರ ಜಿಲ್ಲಾ ಆರೋಪಿಗಳೆನ್ನಲಾದ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಟ್ಟು ₹17.20 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ದಿನಾಂಕ 01-09-2026ರ ಮಧ್ಯರಾತ್ರಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ತುಂಡರಿಸಿ, ಒಳಗಿದ್ದ ಬೆಲೆಬಾಳುವ ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 65/2026ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸೆ.6ರಂದು ಜಾಹೀದ್ ಸಿನಾನ್ ಮತ್ತು ಯಾಸೀನ್ ಅವರನ್ನು ಮುಲ್ಕಿ ಕಾರ್ನಾಡಿನಲ್ಲಿ, ಹಾಗೂ ಸೆ.7ರಂದು ಮಹಮದ್ ಅಫ್ರಿದಿ ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್ ಅವರನ್ನು ದಾವಣಗೆರೆಯಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
₹17.20 ಲಕ್ಷ ಮೌಲ್ಯದ ಸ್ವತ್ತು ವಶ : ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಈ ವೇಳೆ ಆರೋಪಿಗಳಿಂದ ಕಳವು ಮಾಡಲಾದ ಸುಮಾರು 4 ಕೆ.ಜಿ. 521 ಗ್ರಾಂ ತೂಕದ ಬೆಳ್ಳಿ ಹಾಗೂ 34.820 ಗ್ರಾಂ ತೂಕದ ಚಿನ್ನ ಸೇರಿದಂತೆ ಒಟ್ಟು ಅಂದಾಜು ₹11.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಬೈಕ್ ಮತ್ತು ಕಾರು ಸೇರಿದಂತೆ ಸುಮಾರು ₹6 ಲಕ್ಷ ಮೌಲ್ಯದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ₹17.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.
ಮತ್ತೆರಡು ದೇವಸ್ಥಾನ ಕಳವು ಪ್ರಕರಣಗಳು ಪತ್ತೆ ಆರೋಪಿಗಳ ವಿಚಾರಣೆ ಹಾಗೂ ಪತ್ತೆಯಿಂದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ ಮತ್ತು ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಗಳೂ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 154/2026 ಹಾಗೂ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 88/2026ರಂತೆ ಪ್ರಕರಣಗಳು ದಾಖಲಾಗಿದ್ದವು. ಪ್ರಮುಖ ಆರೋಪಿ ವಿರುದ್ಧ 18 ಪ್ರಕರಣ : ಪ್ರಕರಣದ ಮೊದಲ ಆರೋಪಿ ಜಾಹೀದ್ ಸಿನಾನ್ ವಿರುದ್ಧ ಈ ಹಿಂದೆ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ತಂಡದ ಕಾರ್ಯಾಚರಣೆ ಮಂಗಳೂರು ಉತ್ತರ ಉಪವಿಭಾಗದ ACP ಶ್ರೀಕಾಂತ್ ಕೆ. ಅವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಮುಲ್ಕಿ ಠಾಣೆಯ PSI ರಾಘವೇಂದ್ರ ನಾಯಕ್ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೊಲೀಸರ ತಂಡ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಕಳವು ಮಾಡಲಾದ ಹಾಗೂ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

