Sunday, August 16, 2026
Homeಜಿಲ್ಲೆಮಂಗಳೂರು : ಬೆಚ್ಚಿಬೀಳಿಸಿದ ಸಿನಿಮೀಯ ರೀತಿಯ ದರೋಡೆ : ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ಪತ್ನಿ-ಮಗನ...

ಮಂಗಳೂರು : ಬೆಚ್ಚಿಬೀಳಿಸಿದ ಸಿನಿಮೀಯ ರೀತಿಯ ದರೋಡೆ : ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ಪತ್ನಿ-ಮಗನ ಸಮೇತ ಅಪಹರಣ.

ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಂಪಾಡಿ ದ್ವಾರ ಹೋಟೆಲ್ ಸಮೀಪ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ, ಪತ್ನಿ ಹಾಗೂ ಮಗನ ಸಮೇತ ಅಪಹರಿಸಿ ಕಾರಿನೊಂದಿಗೆ ಪರಾರಿಯಾದ ಸಿನಿಮೀಯ ಶೈಲಿಯ ದರೋಡೆ ಪ್ರಕರಣ ಸೋಮವಾರ ಮುಂಜಾನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಕೇರಳದ ಪಯ್ಯನ್ನೂರಿನ ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ವಿಕಾಸ್ (42) ಅವರು ಪತ್ನಿ (38) ಹಾಗೂ ಪುತ್ರ (14) ಅವರೊಂದಿಗೆ ಸಂಖ್ಯೆಯ ಬಿಳಿ ಬಣ್ಣದ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಮುಂಬೈನಿಂದ ಕೇರಳಕ್ಕೆ ಹಿಂದಿರುಗುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ, ಬೈಕಂಪಾಡಿಯ ದ್ವಾರ ಹೋಟೆಲ್ ಬಳಿ ಎರಡು ಇನ್ನೋವಾ ಕಾರುಗಳು ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದ ಸುಮಾರು 7ರಿಂದ 8 ಮಂದಿ ಅಪರಿಚಿತರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ.

ಬಳಿಕ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಮಗನ ಸಮೇತ ಕಾರನ್ನು ಕೊಂಡೊಯ್ದಿದ್ದಾರೆ. ನಂತರ ಪಣಂಬೂರು ಜಂಕ್ಷನ್ ಸಮೀಪ ರೂಪಾಲಿ ಮತ್ತು ವಿಪುಲ್ ಅವರನ್ನು ಕೆಳಗಿಳಿಸಿ, ವಿಕಾಸ್ ಅವರ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ವಿಕಾಸ್ ಅವರು ಕೇರಳದ ಪಯ್ಯನ್ನೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿದ್ದು, ಮುಂಬೈನಲ್ಲಿದ್ದ ಪರಿಚಯಸ್ಥರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular