ಮಂಗಳೂರು : ಕಳೆದ ಆರು ತಿಂಗಳ ಅವಧಿಯಲ್ಲಿ ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಪ್ರಕರಣಗಳು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೋಮವಾರ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಿದರು.



ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಠಾಣೆಗಳ ಕಾರ್ಯಕ್ಷಮತೆಯನ್ನು ಆಧರಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗುರುತಿಸಿ ಈ ಗೌರವ ನೀಡಲಾಯಿತು.
ಕಳೆದ ಆರು ತಿಂಗಳಲ್ಲಿ 24 ಲಾಂಗ್ ಪೆಂಡಿಂಗ್ (LPC) ಪ್ರಕರಣಗಳನ್ನು ಭೇದಿಸಿ, ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, 88 ಕಳವು ಪ್ರಕರಣಗಳನ್ನು ಪತ್ತೆಹಚ್ಚಿ ಸುಮಾರು ₹1.20 ಕೋಟಿ ಮೌಲ್ಯದ ಕಳವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 84 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ 142 ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕ ವಸ್ತು ಸೇವನೆಗೆ ಸಂಬಂಧಿಸಿದ 346 ಪ್ರಕರಣಗಳಲ್ಲಿ 443 ಮಂದಿಯನ್ನು ವಶಕ್ಕೆ ಪಡೆದು ಪೆಡ್ಲರ್ ಜಾಲದ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಸೈಬರ್ ವಂಚನೆ ತಡೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪರಿಣಾಮ ನಗರದಲ್ಲಿ ಸೈಬರ್ ವಂಚನೆ ಪ್ರಕರಣಗಳ ಪ್ರಮಾಣ ಇಳಿಮುಖವಾಗಿದ್ದು, 1930 ಸಹಾಯವಾಣಿಯ ಮೂಲಕ ಸಾರ್ವಜನಿಕರ ಹಣ ಮರುಪಡೆಯಲು ತ್ವರಿತ ಕ್ರಮ ಕೈಗೊಂಡ ಅಧಿಕಾರಿಗಳನ್ನೂ ಗೌರವಿಸಲಾಯಿತು. ನೇಪಾಳದಿಂದ ಕಾರ್ಯನಿರ್ವಹಿಸುತ್ತಿದ್ದ ಇನ್ವೆಸ್ಟ್‌ಮೆಂಟ್ ಫ್ರಾಡ್ ಜಾಲವನ್ನು ಭೇದಿಸುವಲ್ಲಿಯೂ ಮಂಗಳೂರು ಪೊಲೀಸರು ಮಹತ್ವದ ಪಾತ್ರ ವಹಿಸಿದ್ದಾರೆ.
ಇದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಭಾಷಣ, ಅಪಪ್ರಚಾರ ಮತ್ತು ಪ್ರಚೋದನಕಾರಿ ಸಂದೇಶಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡ ಅಧಿಕಾರಿಗಳು, ಗುಣಮಟ್ಟದ ತನಿಖೆಯ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಶ್ರಮಿಸಿದ ತನಿಖಾಧಿಕಾರಿಗಳು, 112 ತುರ್ತು ಸ್ಪಂದನೆ ಸೇವೆ ಹಾಗೂ ಪ್ರಮುಖ ಬಂದೋಬಸ್ತುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ನಿಸ್ತಂತು ವಿಭಾಗದ ಸಿಬ್ಬಂದಿಯನ್ನೂ ಈ ಸಂದರ್ಭದಲ್ಲಿ ಪ್ರಶಂಸಿಸಲಾಯಿತು.


