Monday, July 13, 2026
Homeರಾಜ್ಯಬೆಂಗಳೂರು : ಬೇಕರಿ ಪದಾರ್ಥ, ಚಿಪ್ಸ್ ಆರೋಗ್ಯಕ್ಕೆ ಅಪಾಯ: ಆಹಾರ ಸುರಕ್ಷತಾ ಇಲಾಖೆಯ ಆಘಾತಕಾರಿ ವರದಿ.

ಬೆಂಗಳೂರು : ಬೇಕರಿ ಪದಾರ್ಥ, ಚಿಪ್ಸ್ ಆರೋಗ್ಯಕ್ಕೆ ಅಪಾಯ: ಆಹಾರ ಸುರಕ್ಷತಾ ಇಲಾಖೆಯ ಆಘಾತಕಾರಿ ವರದಿ.

ಬೆಂಗಳೂರು : ರಾಜ್ಯದಲ್ಲಿ ಮಾರಾಟವಾಗುತ್ತಿರುವ ಬೇಕರಿ ಪದಾರ್ಥಗಳು, ಮಿಕ್ಸ್ಚರ್, ಚಿಪ್ಸ್ ಹಾಗೂ ಬಣ್ಣಬಣ್ಣದ ಸ್ವೀಟ್‌ಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆ ತಿಳಿಸಿದೆ.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಹೋಟೆಲ್‌, ಬೇಕರಿ, ಸ್ವೀಟ್ ಸ್ಟಾಲ್ ಹಾಗೂ ಉತ್ಪಾದನಾ ಘಟಕಗಳಿಂದ ಒಟ್ಟು 35,639 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಶೇ.12 ರಿಂದ 15 ರಷ್ಟು ಆಹಾರ ಪದಾರ್ಥಗಳು ಮಾನವ ಬಳಕೆಗೆ ಯೋಗ್ಯವಲ್ಲ ಅಥವಾ ಕಳಪೆ ಗುಣಮಟ್ಟದವು ಎಂದು ವರದಿ ತಿಳಿಸಿದೆ.

ಬೇಕರಿ ಹಾಗೂ ಕರಿದ ತಿಂಡಿಗಳ ಪೈಕಿ 400 ಕ್ಕೂ ಹೆಚ್ಚು ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಮಿಕ್ಸ್ಚರ್, ಚಿಪ್ಸ್ ಮತ್ತು ಬಣ್ಣದ ಸ್ವೀಟ್‌ಗಳಲ್ಲಿ ನಿಷೇಧಿತ ಕೃತಕ ಬಣ್ಣಗಳನ್ನು ಮಿತಿಮೀರಿ ಬಳಸಿರುವುದು ಪತ್ತೆಯಾಗಿದೆ. ಕೆಲವು ಮಾದರಿಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳೂ ಪತ್ತೆಯಾಗಿವೆ.

ಹಾಲು, ಪನ್ನೀರ್, ತುಪ್ಪ ಹಾಗೂ ಬೆಣ್ಣೆಯಲ್ಲಿ ವ್ಯಾಪಕ ಕಲಬೆರಕೆ ನಡೆದಿರುವುದು ಕೂಡ ಬೆಳಕಿಗೆ ಬಂದಿದೆ. ಹಾಲಿನಲ್ಲಿ ಯೂರಿಯಾ, ಡಿಟರ್ಜೆಂಟ್ ಹಾಗೂ ಸ್ಟಾರ್ಚ್ ಬಳಕೆ ಕಂಡುಬಂದಿದ್ದು, ಪನ್ನೀರ್ ಮತ್ತು ತುಪ್ಪದಲ್ಲಿ ಸಸ್ಯಜನ್ಯ ಎಣ್ಣೆ ಮಿಶ್ರಣ ಪತ್ತೆಯಾಗಿದೆ.

ಇದೇ ವೇಳೆ, ಬೇಕರಿ ಹಾಗೂ ನಮ್ಕೀನ್ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಪದೇಪದೇ ಬಳಸುತ್ತಿರುವುದು ಪತ್ತೆಯಾಗಿದ್ದು, ಇದು ಟ್ರಾನ್ಸ್ ಫ್ಯಾಟ್ ಪ್ರಮಾಣ ಹೆಚ್ಚಿಸಿ ಹೃದಯ ಆರೋಗ್ಯಕ್ಕೆ ಅಪಾಯ ಉಂಟುಮಾಡಬಹುದು ಎಂದು ಇಲಾಖೆ ಎಚ್ಚರಿಸಿದೆ.

ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ 390 ಕ್ಕೂ ಹೆಚ್ಚು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ₹77 ಲಕ್ಷಕ್ಕೂ ಅಧಿಕ ದಂಡ ವಿಧಿಸಲಾಗಿದೆ. ಕೆಲವು ಅನಧಿಕೃತ ಘಟಕಗಳಿಗೆ ಬೀಗ ಜಡಿಸಲಾಗಿದೆ.

ಗ್ರಾಹಕರು ಆಹಾರ ಪದಾರ್ಥಗಳನ್ನು ಖರೀದಿಸುವ ವೇಳೆ ಎಫ್‌ಎಸ್‌ಎಸ್‌ಎಐ ಪರವಾನಗಿ ಹಾಗೂ ಅವಧಿ ಮುಗಿಯುವ ದಿನಾಂಕ ಪರಿಶೀಲಿಸುವಂತೆ ಇಲಾಖೆ ಸಲಹೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular