ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘದ ಪಡೀಲ್ ಶಾಖೆಯಲ್ಲಿ ನಡೆದಿರುವ ನಕಲಿ ಚಿನ್ನಾಭರಣ ಸಾಲ ಅವ್ಯವಹಾರ 2023–24ರ ಸಹಕಾರಿ ಲೆಕ್ಕಪರಿಶೋಧನಾ ಇಲಾಖೆಯ ಮರುಪರಿಶೀಲನಾ ವರದಿಯಲ್ಲಿ ದೃಢಪಟ್ಟಿದೆ ಎಂದು ಸಂಘದ ಹಿರಿಯ ಸದಸ್ಯರು ತಿಳಿಸಿದ್ದಾರೆ.
₹2.38 ಕೋಟಿ ಮೌಲ್ಯದ ಚಿನ್ನಾಭರಣ ಸಾಲಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳದೆ, ಸಾಲ ಮುಕ್ತಾಯಗೊಳಿಸಲು ₹40 ಲಕ್ಷ ಉಚಾಪತಿ ಸಾಲ ಹಾಗೂ ₹1.02 ಕೋಟಿ ಅಡಮಾನ ಸಾಲ ನೀಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಚಿನ್ನಾಭರಣಗಳ ಹರಾಜು ಪ್ರಕ್ರಿಯೆಯೂ ಅನುಮಾನಾಸ್ಪದವಾಗಿದೆ ಎಂದು ವರದಿ ಹೇಳಿದೆ.
ಈ ಪ್ರಕರಣದಲ್ಲಿ ಅಬುಬಕರ್ ಸಿದ್ದಿಕ್, ರೋಶಿನಾಬಿ, ಆಡಳಿತ ಮಂಡಳಿ, ಪ್ರಧಾನ ವ್ಯವಸ್ಥಾಪಕರು, ಶಾಖಾಧಿಕಾರಿ ಹಾಗೂ ಚಿನ್ನದ ಮೌಲ್ಯಮಾಪಕರು ಸೇರಿದಂತೆ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿ ಮಾಡಲಾಗಿದೆ.
ಬಡ್ಡಿ ಸೇರಿದಂತೆ ₹2.74 ಕೋಟಿ ಸಾಲವನ್ನು ಮರುಪಾವತಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಹಿರಿಯ ಸದಸ್ಯರಾದ ದಿವಾಕರ್ ಪಿ. ಹಾಗೂ ಶಿವಣ್ಣ ತಿಳಿಸಿದ್ದಾರೆ.

