Saturday, August 8, 2026
Homeಜಿಲ್ಲೆಪುತ್ತೂರು : ಮಳೆಯ ನಡುವೆಯೂ ಮೊಳಗಿದ ದೇಶಭಕ್ತಿ : ಪುತ್ತೂರಿನಲ್ಲಿ ಬೃಹತ್ ತಿರಂಗಾ ಯಾತ್ರೆ, ಹಲವಾರು...

ಪುತ್ತೂರು : ಮಳೆಯ ನಡುವೆಯೂ ಮೊಳಗಿದ ದೇಶಭಕ್ತಿ : ಪುತ್ತೂರಿನಲ್ಲಿ ಬೃಹತ್ ತಿರಂಗಾ ಯಾತ್ರೆ, ಹಲವಾರು ಮಂದಿ ಬಾಗಿ.

ಪುತ್ತೂರು : ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ತಿರಂಗಾ ಯಾತ್ರಾ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಕಿಲ್ಲೆ ಮೈದಾನದಲ್ಲಿರುವ ಪುರಭವನದವರೆಗೆ ನಡೆದ ಯಾತ್ರೆಯಲ್ಲಿ ಮಳೆಯನ್ನೂ ಲೆಕ್ಕಿಸದೆ ಸಹಸ್ರಾರು ಮಂದಿ ತ್ರಿವರ್ಣ ಧ್ವಜ ಹಿಡಿದು ಪಾಲ್ಗೊಂಡರು.

ಯಾತ್ರೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಆರಂಭಗೊಂಡು ನಗರದ ಮುಖ್ಯರಸ್ತೆ, ಹಳೆ ಅಂಚೆ ಕಚೇರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಕೋರ್ಟ್ ರಸ್ತೆಯ ಮೂಲಕ ಕಿಲ್ಲೆ ಮೈದಾನ ತಲುಪಿತು. ಯಾತ್ರೆಯಿಂದ ನಗರದಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಾಣವಾಯಿತು.

ಹೈಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್ ಮೆರವಣಿಗೆಯನ್ನು ಉದ್ಘಾಟಿಸಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಧಾನ ಭಾಷಣ ಮಾಡಿದರು. ಭಾರತೀಯ ಸೈನ್ಯದಲ್ಲಿ ಜಾತಿ, ಧರ್ಮದ ಲೆಕ್ಕಾಚಾರಕ್ಕೆ ಅವಕಾಶವಿಲ್ಲ. ದೇಶಕ್ಕಾಗಿ ಹೋರಾಡುವ ಸೈನಿಕರಲ್ಲಿ ಇರುವುದೊಂದೇ ದೇಶಭಕ್ತಿ. ಸೈನ್ಯದಂತಹ ಶಿಸ್ತಿನ ವ್ಯವಸ್ಥೆಯಲ್ಲೂ ಜಾತಿಯನ್ನು ಹುಡುಕುವ ಮನಸ್ಥಿತಿ ಅಪಾಯಕಾರಿ ಎಂದು ಹೇಳಿದರು.

‘ತ್ರಿವರ್ಣ ಧ್ವಜವೇ ದೇಶದ ಏಕೈಕ ರಾಷ್ಟ್ರೀಯ ಹೆಮ್ಮೆ’ ಎಂದು ಪ್ರತಿಪಾದಿಸಿದ ಅವರು, ವಿವಿಧ ಪಕ್ಷಗಳು, ಸಂಘಟನೆಗಳು ಹಾಗೂ ಸಮುದಾಯಗಳಿಗೆ ತಮ್ಮದೇ ಧ್ವಜಗಳಿರಬಹುದು. ಆದರೆ ದೇಶವನ್ನು ಪ್ರತಿನಿಧಿಸುವುದು ಒಂದೇ ರಾಷ್ಟ್ರಧ್ವಜ. ಅದರ ಗೌರವ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಸೇರಿದಂತೆ ಭಾರತೀಯ ಸೈನಿಕರು ಪ್ರದರ್ಶಿಸಿದ ಸಾಹಸವನ್ನು ಸ್ಮರಿಸಿದ ಸಿ.ಟಿ. ರವಿ, ಗುಂಡಿನ ಮಳೆಯ ನಡುವೆಯೂ ದೇಶಕ್ಕಾಗಿ ಹೋರಾಡಿದ ಸೈನಿಕರ ಧೈರ್ಯ ಎಲ್ಲರಿಗೂ ಸ್ಫೂರ್ತಿ ಎಂದರು.

ಭಾರತದ ಸ್ವಾತಂತ್ರ್ಯ ಕೇವಲ ಅಹಿಂಸಾತ್ಮಕ ಹೋರಾಟದ ಫಲ ಎಂಬುದು ಅರ್ಧಸತ್ಯ. ಮಹಾತ್ಮ ಗಾಂಧೀಜಿ ಜನಸಾಮಾನ್ಯರನ್ನು ಸ್ವಾತಂತ್ರ್ಯ ಚಳುವಳಿಗೆ ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದರೆ, ಕ್ರಾಂತಿಕಾರಿಗಳ ಹೋರಾಟ, ತ್ಯಾಗ ಮತ್ತು ಬಲಿದಾನವೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ವೀರ ಸಾವರ್ಕರ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಒಂದೇ ದೃಷ್ಟಿಕೋನದಲ್ಲಿ ನೋಡದೆ, ವಿವಿಧ ಹೋರಾಟಗಾರರ ಕೊಡುಗೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು ಎಂದರು.ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢ ನಾಯಕತ್ವದಿಂದ ದೇಶದ ಏಕತೆ ಸಾಧ್ಯವಾಯಿತು. ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಬಾರದು ಎಂದು ಹೇಳಿದರು.ಇಂದು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಗತ್ಯವಿಲ್ಲ. ಬದಲಾಗಿ ಬಡವರು, ಶೋಷಿತರು ಮತ್ತು ನಿರ್ಗತಿಕರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗುವಂತೆ ಮಾಡುವುದು ನಮ್ಮ ಜವಾಬ್ದಾರಿ. ದೇಶದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಅವಕಾಶ ದೊರೆಯಬೇಕು ಎಂದರು.

1948, 1962, 1965, 1971 ಹಾಗೂ 1999ರ ಕಾರ್ಗಿಲ್ ಯುದ್ಧ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಭಾರತೀಯ ಸೈನ್ಯ ತನ್ನ ಪರಾಕ್ರಮ ಸಾಬೀತುಪಡಿಸಿದೆ. ಸೈನ್ಯದ ಶೌರ್ಯವನ್ನು ಜಾತಿಯ ಕನ್ನಡಕದಿಂದ ನೋಡುವುದು ಸರಿಯಲ್ಲ. ಸೈನಿಕರನ್ನು ಜಾತಿಯ ಆಧಾರದ ಮೇಲೆ ಗುರುತಿಸುವ ಪ್ರಯತ್ನ ದೇಶದ ಭದ್ರತೆ ಮತ್ತು ಏಕತೆಗೆ ಅಪಾಯಕಾರಿ ಎಂದು ಎಚ್ಚರಿಸಿದರು.

ದೇಶವನ್ನು ವಿಭಜಿಸುವ ಮನಸ್ಥಿತಿಗಳನ್ನು ಮೆಟ್ಟಿ ನಿಂತು ತಾಯಿ ಭಾರತಿಯ ಸೇವೆಯಲ್ಲಿ ಎಲ್ಲರೂ ಒಂದಾಗಿ ನಿಲ್ಲಬೇಕು. ದೇಶದ ಅಖಂಡತೆ, ರಾಷ್ಟ್ರಧ್ವಜದ ಗೌರವ ಹಾಗೂ ಸೈನಿಕರ ತ್ಯಾಗವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.

ಯಾತ್ರೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಡಿ. ವೇದವ್ಯಾಸ ಕಾಮತ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಕೆ. ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಕಳ್ಳಿಮಾರ್, ಗ್ರಾಮಾಂತರ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular