Wednesday, June 24, 2026
Flats for sale
Homeಜಿಲ್ಲೆಪುತ್ತೂರು : ನಾಪತ್ತೆಯಾಗಿದ್ದ ದೇಸಿ ನಾಯಿ ಪತ್ತೆ : ಮಾತಿನಂತೆ ₹50 ಸಾವಿರ ಬಹುಮಾನ ನೀಡಿದ...

ಪುತ್ತೂರು : ನಾಪತ್ತೆಯಾಗಿದ್ದ ದೇಸಿ ನಾಯಿ ಪತ್ತೆ : ಮಾತಿನಂತೆ ₹50 ಸಾವಿರ ಬಹುಮಾನ ನೀಡಿದ ಮಾಲೀಕ.

ಪುತ್ತೂರು : ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ‘ಚಿನ್ನು’ ಹೆಸರಿನ ದೇಸಿ ತಳಿಯ ನಾಯಿ ಇದೀಗ ಮತ್ತೆ ತನ್ನ ಮಾಲೀಕರ ಮನೆ ಸೇರಿದ್ದು, ನಾಯಿಯನ್ನು ಪತ್ತೆಹಚ್ಚಿ ನೀಡಿದ ವ್ಯಕ್ತಿಗೆ ಮಾಲೀಕರು ಘೋಷಿಸಿದ್ದಂತೆ ₹50 ಸಾವಿರ ಬಹುಮಾನ ವಿತರಿಸಿದ್ದಾರೆ.

ಕಬಕ ಸಮೀಪದ ಪೋಳ್ಯ ನಿವಾಸಿ ಗಣೇಶ್ ಕೇರ ಅವರ ಮನೆಯ ‘ಚಿನ್ನು’ ಎಂಬ ನಾಯಿ ಕಾಣೆಯಾಗಿತ್ತು. ಫಿಟ್ಸ್‌ನಿಂದಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಈ ನಾಯಿ ಕಾಣೆಯಾಗಿದ್ದರಿಂದ ಆತಂಕಗೊಂಡಿದ್ದ ಗಣೇಶ್ ಕೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಲ್ಲದೆ, ವಿವಿಧ ಕಡೆ ಬ್ಯಾನರ್ ಅಳವಡಿಸಿ ನಾಯಿಯ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟವರಿಗೆ ₹50 ಸಾವಿರ ಬಹುಮಾನ ಘೋಷಿಸಿದ್ದರು.

ಈ ನಡುವೆ ಪೋಳ್ಯ ನಿವಾಸಿ ಪುರಂದರ ಅವರು ನಾಪತ್ತೆಯಾಗಿದ್ದ ನಾಯಿಯನ್ನು ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಕೊಟ್ಟ ಮಾತಿನಂತೆ ಗಣೇಶ್ ಕೇರ ಅವರು ಪುರಂದರ ಅವರನ್ನು ಮನೆಗೆ ಆಹ್ವಾನಿಸಿ ₹50 ಸಾವಿರ ಮೊತ್ತದ ಚೆಕ್ ವಿತರಿಸಿದರು.

ಮೂರು ವಾರಗಳ ಬಳಿಕ ಪತ್ತೆ ನಾಪತ್ತೆಯಾಗಿದ್ದ ಚಿನ್ನು, ಗಣೇಶ್ ಅವರ ಮನೆಯ ಸುತ್ತಮುತ್ತ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲೇ ತಿರುಗಾಡುತ್ತಿತ್ತು ಎನ್ನಲಾಗಿದೆ. ನಾಯಿ ಕಾಣೆಯಾದ ಮೂರು ದಿನಗಳ ಬಳಿಕ ಪುರಂದರ ಅವರ ಕಣ್ಣಿಗೆ ಬಿದ್ದಿದ್ದರೂ, ಆ ವೇಳೆ ಅದನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಎರಡು ದಿನಗಳ ಹಿಂದೆ ಮತ್ತೆ ನಾಯಿಯನ್ನು ಕಂಡು ಹಿಡಿದ ಪುರಂದರ ಅವರು ಅದನ್ನು ಸುರಕ್ಷಿತವಾಗಿ ಹಿಡಿದು ಮಾಲೀಕರಿಗೆ ಒಪ್ಪಿಸಿದ್ದಾರೆ.

ಶ್ವಾನಪ್ರೇಮಿಯ ಮಾನವೀಯತೆ ಗಣೇಶ್ ಕೇರ ಅವರು ಮನೆಯಲ್ಲಿ ಸುಮಾರು 30 ವಿವಿಧ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ. ರಸ್ತೆ ಬದಿಯಲ್ಲಿ ಸಿಗುವ ಅನಾಥ ಹಾಗೂ ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ನೀಡಿ ಆಶ್ರಯ ನೀಡುವುದು ಅವರ ಹವ್ಯಾಸವಾಗಿದೆ. ‘ಚಿನ್ನು’ ಕೂಡ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂದರ್ಭದಲ್ಲಿ ಗಣೇಶ್ ಅವರ ಆಶ್ರಯ ಪಡೆದಿದ್ದು, ಬಳಿಕ ಮನೆಯ ಸದಸ್ಯನಂತೆಯೇ ಬೆಳೆದಿತ್ತು.
ಚಿನ್ನು ಮತ್ತೆ ಮನೆ ಸೇರಿದ ಖುಷಿಯನ್ನು ಗಣೇಶ್ ಕೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನಾಯಿಯನ್ನು ಪತ್ತೆಹಚ್ಚಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular