ನವದೆಹಲಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸ್ಪಷ್ಟ ಸಂದೇಶ ರವಾನಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಕ್ಷದ ವಿರುದ್ಧ ಕಾರ್ಯನಿರ್ವಹಿಸಿದ ಶಾಸಕರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಅಡ್ಡಮತದಾನ ಮಾಡಿದವರ ಕುರಿತು ಖಚಿತ ಮಾಹಿತಿ ಸಂಗ್ರಹಿಸಿ ಸೂಕ್ತ ಸಮಯದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ B. Y. ವಿಜಯೇಂದ್ರ , ವಿಧಾನಸಭೆ ಪ್ರತಿಪಕ್ಷ ನಾಯಕ R. ಅಶೋಕ ಹಾಗೂ ಚೀಫ್ ವಿಪ್ ದೊಡ್ಡನಗೌಡ ಪಾಟೀಲ್ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆಯ ಬೆಳವಣಿಗೆಗಳ ಕುರಿತು ವಿವರಣೆ ನೀಡಿದ್ದಾರೆ.
ಸಭೆಯಲ್ಲಿ ರಾಜ್ಯ ಬಿಜೆಪಿಯ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಷ್ಟ್ರೀಯ ನಾಯಕತ್ವ, ಅಡ್ಡಮತದಾನದ ಕುರಿತು ಮೊದಲೇ ಮಾಹಿತಿ ಇದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ದೊಡ್ಡ ಪ್ರಮಾದ ಎಂದು ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.
ಅಡ್ಡಮತದಾನ ಮಾಡಿದವರ ಪತ್ತೆಗೆ ರಚಿಸಲಾದ ಸಮಿತಿಯು ಕೂಲಂಕಷ ತನಿಖೆ ನಡೆಸಿ ಶೀಘ್ರದಲ್ಲೇ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ಘಟಕವೂ ತನ್ನದೇ ಮೂಲಗಳ ಮೂಲಕ ಮಾಹಿತಿ ಸಂಗ್ರಹಿಸಿ ತಪ್ಪಿತಸ್ಥರನ್ನು ಗುರುತಿಸುವ ಕಾರ್ಯ ನಡೆಸಲಿದೆ ಎಂದು ಹೇಳಲಾಗಿದೆ.
ವಿಧಾನ ಪರಿಷತ್ ಚುನಾವಣೆಯ ಮತಗಳ ಹಂಚಿಕೆ, ಪಕ್ಷದೊಳಗಿನ ಕಾರ್ಯತಂತ್ರ ಹಾಗೂ ಶಾಸಕರ ಮತದಾನದ ಪ್ರಕ್ರಿಯೆ ಕುರಿತು ರಾಜ್ಯ ನಾಯಕರು ರಾಷ್ಟ್ರೀಯ ಅಧ್ಯಕ್ಷರಿಗೆ ವಿವರ ನೀಡಿದ್ದಾರೆ. ಈ ವೇಳೆ ಮತಗಳ ಹಂಚಿಕೆ ಯಾವ ಆಧಾರದ ಮೇಲೆ ಮಾಡಲಾಗಿತ್ತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗಿದೆ.
ಇದೇ ವೇಳೆ ಅಡ್ಡಮತದಾನ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಯಾವುದೇ ಶಾಸಕಾಂಗ ಪಕ್ಷದ ಸಭೆ ನಡೆಸುವ ಅಗತ್ಯವಿಲ್ಲ ಎಂದು ರಾಜ್ಯ ಘಟಕಕ್ಕೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


