ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಆಲ್ಕೆರೆ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದ್ದು, ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು ಶಿವಣ್ಣ (40), ಜೀವನ್ (11) ಮತ್ತು ಪ್ರಾಣೇಶ್ (6) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಶಿವಣ್ಣ ಗ್ರಾಮದಲ್ಲಿ ದೇವಸ್ಥಾನ ಪೂಜೆ ಮಾಡುತ್ತಿದ್ದು, ಜೊತೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದ ಶಿವಣ್ಣನ ಪತ್ನಿ ಕಳೆದ ವಾರ ಪರಪುರುಷನೊಂದಿಗೆ ಮನೆಯಿಂದ ಓಡಿ ಹೋಗಿದ್ದಳು. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.
ನಂತರ ಮನೆಗೆ ಮರಳಿದ್ದ ಪತ್ನಿ, ಮರುದಿನ ಶಿವಣ್ಣ ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಮತ್ತೆ ಪರಾರಿಯಾಗಿದ್ದಳು ಎನ್ನಲಾಗಿದೆ. ಈ ಘಟನೆಗಳಿಂದ ಮನನೊಂದ ಶಿವಣ್ಣ, ನಿನ್ನೆ ರಾತ್ರಿ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂದು ಬೆಳಗ್ಗೆ ಅಕ್ಕಪಕ್ಕದವರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಕುಣಿಗಲ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ಮುಂದಿನ ತನಿಖೆ ಮುಂದುವರಿದಿದೆ.


