ತುಮಕೂರು : ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಬೆಂಗಳೂರಿನ ಉಮರ್ (32), ನಜೀರ್ (35), ನವೀದ್ (32) ಹಾಗೂ ತುಮಕೂರಿನ ಮರಳೂರುದಿಣ್ಣೆ ನಿವಾಸಿಗಳಾದ ಶಾಹಬಾಜ್ (30), ಮಹಮ್ಮದ್ ಗೌಸ್ (32), ಮಹಮ್ಮದ್ ಇಕ್ಬಾಲ್ (28) ಎಂದು ಗುರುತಿಸಲಾಗಿದೆ.
ಆರೋಪಿಗಳು ತುಮಕೂರು ನಗರದ ವಿವಿಧ ಕಾಲೇಜುಗಳ ಬಳಿ ನಿಂತುಕೊಂಡು ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆಗಳ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಿಲಕ್ ಪಾರ್ಕ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯ ವೇಳೆ ಆರೋಪಿಗಳ ಬಳಿಯಿಂದ Tapedac 100 mg ಹಾಗೂ Tydel-100 mg (Tapentadol Tablets) ಸೇರಿದಂತೆ ಒಟ್ಟು 100 ಮಾದಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.


