ಚಿಕ್ಕಮಗಳೂರು : ರಸ್ತೆ ಬದಿಯಲ್ಲಿ ನಿಂತಿದ್ದ ಸಿಲಿಂಡರ್ ತುಂಬಿದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ನಡೆದಿದೆ.
ತುಮಕೂರು ಮೂಲದ ಪ್ರವಾಸಿಗರು ಕಾರಿನಲ್ಲಿ ತುಮಕೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಕೊಟ್ಟಿಗೆಹಾರದಲ್ಲಿ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆ ಬದಿಯಲ್ಲಿ ನಿಂತಿದ್ದ ಸಿಲಿಂಡರ್ ತುಂಬಿದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಗುರುಕಿರಣ್ (28), ಮೋಹನ್ (30) ಹಾಗೂ ಜ್ಞಾನೇಶ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಪ್ರೇಮ್ ಕುಮಾರ್ ಹಾಗೂ ಹೃತಿಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

