ಉಡುಪಿ : ಹುಟ್ಟಿ ಕೆಲವೇ ಗಂಟೆಗಳಾಗಿದ್ದ ನವಜಾತ ಹೆಣ್ಣು ಶಿಶುವೊಂದನ್ನು ಕಾಲುದಾರಿಯಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಪ್ರದೇಶದಲ್ಲಿ ನಡೆದಿದೆ.
ಮನೆಯೊಂದಕ್ಕೆ ತೆರಳುವ ಕಾಲುದಾರಿಯಲ್ಲಿ ನವಜಾತ ಶಿಶು ಅನಾಥವಾಗಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಶಿಶುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪರಿಶೀಲನೆ ವೇಳೆ ಶಿಶುವಿನ ಹೃದಯ ಬಡಿತ ಇರುವುದು ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿಶುವನ್ನು ಯಾರು ಬಂದು ಬಿಟ್ಟುಹೋದರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸಿದ್ದಾರೆ. ನವಜಾತ ಶಿಶುವನ್ನು ಬಿಟ್ಟುಹೋದವರ ಪತ್ತೆಗಾಗಿ ಪೊಲೀಸರ ತನಿಖೆ ತೀವ್ರಗೊಂಡಿದೆ.

