ಸೋಮವಾರಪೇಟೆ : 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ತೊಡಬೇಕು ಎಂದು ಪತ್ರಕರ್ತ ಎಸ್. ಮಹೇಶ್ ಕರೆ ನೀಡಿದರು. ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಹಾಗೂ ಟ್ರೇಡ್ ಯೂನಿಯನ್ ವತಿಯಿಂದ ಸೋಮವಾರಪೇಟೆ ಪಟ್ಟಣದ ಜಿ.ಸಿ. ವೇದಿಕೆಯಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕರ ತ್ಯಾಗದ ಫಲವಾಗಿ ಇಂದು ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದರು.

ಅಂದು ಬ್ರಿಟಿಷರ ವಿರುದ್ಧ ಹೋರಾಡಬೇಕಾಗಿತ್ತು. ಆದರೆ ಇಂದು ದೇಶದ ಆಂತರಿಕ ವಿಧ್ವಂಸಕ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದು ಹೇಳಿದರು. 2047ರಲ್ಲಿ ದೇಶ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿರುವ ಹಿನ್ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿ, ಸ್ವಾವಲಂಬನೆ, ಸಮಗ್ರ ಅಭಿವೃದ್ಧಿ ಹಾಗೂ ಸುಸ್ಥಿರತೆಯ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ತೊಟ್ಟಿದ್ದಾರೆ. ದೇಶದ ಪ್ರಜೆಗಳಾದ ನಾವು ಈ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಲ್ಯಾಣಸ್ವಾಮಿಯನ್ನು ಇತಿಹಾಸ ಮರೆಯಬಾರದು 1873ರಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಹೆಮ್ಮನೆ ಗ್ರಾಮದ ಪುಟ್ಟಬಸಪ್ಪ ಅಲಿಯಾಸ್ ಕಲ್ಯಾಣಸ್ವಾಮಿ ಬ್ರಿಟಿಷರ ವಿರುದ್ಧ ಹೋರಾಡಿ ಜಯಗಳಿಸಿ ಮಂಗಳೂರಿನ ಬಾವುಟಗುಡ್ಡದಲ್ಲಿ ನಾಡಿನ ಧ್ವಜ ಹಾರಿಸಿದ್ದರು. ಬಳಿಕ ಬ್ರಿಟಿಷರ ಹುನ್ನಾರದಿಂದ ಅವರು ನೇಣಿಗೇರಿದರು. ಇಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನನ್ನು ಇತಿಹಾಸ ಮರೆಯುತ್ತಿರುವುದು ವಿಷಾದನೀಯ ಎಂದು ಎಸ್. ಮಹೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಮುದ್ದು ಮಾದೇವ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕ ಚಂದ್ರಕುಮಾರ್, ವೈದ್ಯರಾದ ಜಯರಾಜ್ ಹಾಗೂ ಪೌರಕಾರ್ಮಿಕೆ ಶ್ರೀಮತಿ ಕಾಳಮ್ಮ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವಸಂತಾಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ನಗರಾಧ್ಯಕ್ಷ ಮಂಜುನಾಥ್, ನಿವೃತ್ತ ಶಿಕ್ಷಕ ರಾಜಪ್ಪ, ಭಾಸ್ಕರ್, ಕೃಷ್ಣಕುಮಾರ್, ಜಲೀಲ್ ಸಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯೂಟ್ಯೂಬರ್‌ಗಳಾದ ಮದನ್, ವಿಕಿಲ್ ರೈ, ಜಗದೀಶ್, ಪ್ರಸನ್ನ, ಗಣೇಶ್, ಸುನೀಲ್, ನಿತಿನ್, ವಿಶ್ವ ಹಾಗೂ ರೋಹಿತ್ ಪೂಜಾರಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಸಿ.ಕೆ. ಸೈನಿಕ ತರಬೇತಿ ಶಾಲೆಯ ವಿದ್ಯಾರ್ಥಿಗಳು ಧ್ವಜವಂದನೆ ಹಾಗೂ ಗೌರವ ರಕ್ಷೆ ಸಲ್ಲಿಸಿದರು.

