ಸುಳ್ಯ ; ಕಳ್ಳನೊಬ್ಬ ಸ್ಕೂಟಿ ಬೈಕೊಂದನ್ನು ಕದ್ದುಕೊಂಡು ಬಂದು ಹೋಟೆಲ್ ಒಂದರ ಶೌಚಾಲಯದಲ್ಲಿ ನಿದ್ದೆ ಮಾಡಿ ಕೊನೆಗೆ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸ್ಕೂಟಿಯೊಂದನ್ನು ಕದ್ದುಕೊಂಡು ಬಂದು ಮಂಡ್ಯದತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಸುಳ್ಯ ಸಮೀಪದ ಗೂನಡ್ಕ ದ ದೊಡ್ಡಡ್ಕದಲ್ಲಿರುವ ತಾಜುದ್ದೀನ್ ಟರ್ಲಿ ಎಂಬುವವರ ಇಂಡಿಯನ್ ಗೇಟ್ ಹೋಟೆಲ್ ನಲ್ಲಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದಾನೆ. ಟೀ ಕುಡಿದ ಬಳಿಕ ಈತ ಶೌಚಾಲಯಕ್ಕೆ ಎಂದು ಹೋದವನು ಸುಮಾರು ಅರ್ಧ ಗಂಟೆ ಕಳೆದರೂ ಹೊರ ಬಾರದೆ ಇದ್ದಾಗ ಹೋಟೆಲ್‌ನಲ್ಲಿ ಇದ್ದವರು ಶೌಚಾಲಯದ ಬಾಗಿಲನ್ನು ಬಡಿದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಶಬ್ದಗಳು ಬಾರದಿದ್ದಾಗ ಶೌಚಾಲಯದ ಬಾಗಿಲಿನ ಮೇಲ್ಬಾಗದ ರಂದ್ರದಿಂದ ಇಣುಕಿ ನೋಡಿದಾಗ ಆತ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಗಾಬರಿಗೊಂಡ ಹೊಟೇಲಿನವರು ಆತನ ಮೇಲೆ ನೀರನ್ನೂ ಹಾಕಿದ್ದಾರೆ.
ಈ ವೇಳೆ ನಿದ್ದೆಯಿಂದ ಎದ್ದ ಆತ ಶೌಚಾಲಯದ ಬಾಗಿಲು ತೆಗೆದು
ಹೊರಬಂದಿದ್ದಾನೆ.
ಈ ವೇಳೆ ಹೋಟೆಲ್‌ನವರು ಆತನ ಬಳಿ ವಿಚಾರಿಸಿದಾಗ ಸಂಶಯಸ್ಪದವಾಗಿ ಮಾತನಾಡಿದ್ದು ಬಳಿಕ ಅಲ್ಲಿಂದ ಸ್ಕೂಟಿಯಲ್ಲಿ ಮಡಿಕೇರಿ ಕಡೆ ತೆರಳಲು ಪ್ರಯತ್ನ ಮಾಡಿದ್ದಾನೆ. ಈತನ ಬಗ್ಗೆ ಸಂಶಯಗೊಂಡ ಹೋಟೆಲ್ ನವರು ಕಲ್ಲುಗುಂಡಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಕಲ್ಲುಗುಂಡಿ ಎಂಬಲ್ಲಿ ವಾಹನ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದಾಗ ಈತ ಮಾಡಿದ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕೋಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅಲ್ಲಿನ ಪೋಲಿಸರು ಸ್ಕೂಟಿ ವಾಹನವೊಂದು ಕಳ್ಳತನವಾಗಿರುವ ದೂರು ದಾಖಲಾಗಿರುವ ಮಾಹಿತಿ ನೀಡಿದ್ದಾರೆ. ಬಳಿಕ ಕೋಟಾ ಪೊಲೀಸರು ಸುಳ್ಯಕ್ಕೆ ಆಗಮಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.