ಮೈಸೂರು : ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಧ್ರುವನಾರಾಯಣ ಹೃದಯಾಘಾತದಿಂದ ನಗರದಲ್ಲಿ ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 61 ವರ್ಷ.
ಧ್ರುವನಾರಾಯಣ ಅವರು 1983 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ಸೇರ್ಪಡೆಗೊಂಡರು ಮತ್ತು ಸಮಯ ಕಳೆದಂತೆ ನಾಯಕರಾಗಿ ಮುನ್ನಡೆದರು. 2004ರಲ್ಲಿ ಸಂತೇಮರಹಳ್ಳಿ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು.
1999ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಎಸ್)ನ ಎಆರ್ ಕೃಷ್ಣಮೂರ್ತಿ ವಿರುದ್ಧ ಧ್ರುವನಾರಾಯಣ ಸೋಲು ಕಂಡಿದ್ದರು. ಆದರೆ ಧ್ರುವನಾರಾಯಣ ಅವರು 2004ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಕೃಷ್ಣಮೂರ್ತಿ ಅವರನ್ನು ಸೋಲಿಸಿದ್ದರು.
ಧ್ರುವನಾರಾಯಣ ಅವರು 2009 ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ರಾಜಕೀಯಕ್ಕೆ ಬರುವ ಮೊದಲು ವೃತ್ತಿಯಲ್ಲಿ ಕೃಷಿಕರಾಗಿದ್ದರು.