ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಜಂಕ್ಷನ್ ಬಳಿ ಭೀಕರ ಸರಣಿ ಅಪಘಾತ ನಡೆದಿದ್ದು ಆಟೋ ಚಾಲಕ ಸಹಿತ ನಾಲ್ವರು ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರಿಗೆ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಈ ಸಂದರ್ಭ ಸುರತ್ಕಲ್ ಕಡೆಯಿಂದ ಕಾರಿನ ಹಿಂಬದಿ ಬರುತ್ತಿದ್ದ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.


ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ಆಟೋದಲ್ಲಿದ್ದ ಚಾಲಕ ಹಾಗೂ ಮಹಿಳಾ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಅಪಘಾತಕ್ಕೀಡಾದ ಮೂರು ವಾಹನಗಳನ್ನು ಸ್ಥಳದಿಂದ
ತೆರವು ಗೊಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಗೊಂಡ ಬಳಿಕ ಅಪಾಯಕಾರಿ ಬಪ್ಪನಾಡು ಜಂಕ್ಷನ್ ಬಳಿ ಅನೇಕ ಅಪಘಾತಗಳು ನಡೆದಿದ್ದು ಅಪಘಾತ ತಡೆಗೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಆದರೆ ಬೆಳಗಿನ ಜಾವ ಬ್ಯಾರಿಕೇಡ್ ಅಳವಡಿಸದೇ ಇರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.