ಮುಂಬೈ : ಜಪಾನ್‌ನ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಸಿಇಒ ತೊಶಿಹಿರೊ ಸುಜುಕಿ ಅವರು ಮುಂಬರುವ ವರ್ಷಗಳಲ್ಲಿ ಗುಜರಾತ್‌ನಲ್ಲಿ ಒಟ್ಟು 38,200 ಕೋಟಿ ರೂಪಾಯಿ ಹೂಡಿಕೆ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆ 2024 ರಲ್ಲಿ ಈ ಘೋಷಣೆ ಮಾಡಲಾಗಿದೆ.
ಗುಜರಾತ್ ಆರಂಭವಾಗುತ್ತಿರುವ ಮಾರುತಿ ಸುಜುಕಿ ಹೊಸ ಇವಿ ಉತ್ಪಾದನಾ ಘಟಕವು ವಾರ್ಷಿಕವಾಗಿ 2.5 ಲಕ್ಷ ವಾಹನ ಉತ್ಪಾದನಾ ಸಾಮರ್ಥ್ಯ ಹೊಂದಿಲಿದ್ದು, ಇದಕ್ಕಾಗಿ ರೂ. 3,200 ಕೋಟಿ ಆರಂಭಿಕ ಹೂಡಿಕೆ ಮಾಡಲಾಗುತ್ತಿದೆ. ಇದರೊಂದಿಗೆ ಸಾಮಾನ್ಯ ಕಾರುಗಳ ಉತ್ಪಾದನೆಗಾಗಿ ಹೊಸ ಘಟಕ ಸ್ಥಾಪನೆ ಮತ್ತು ಕಾರ್ಯಾಚರಣೆಯಲ್ಲಿರುವ ಘಟಕಗಳ ಉತ್ಪದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ರೂ. 35,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.
ಮೊದಲ ಹೂಡಿಕೆಯು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಗುಜರಾತ್‌ನಲ್ಲಿ ಹೊಸ ಆಟೋಮೊಬೈಲ್ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದೆ, ಇದು FY28-29 ರಲ್ಲಿ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 1 ಮಿಲಿಯನ್ ಘಟಕಗಳೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಹೊಸ ಬಂಡವಾಳ ಹೂಡಿಕೆಯೊಂದಿಗೆ ಮಾರುತಿ ಸುಜುಕಿಯು ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 7.5 ಲಕ್ಷ ಯುನಿಟ್ ನಿಂದ 10 ಲಕ್ಷ ಯುನಿಟ್‌ಗಳಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಹನ ಉತ್ಪಾದನೆಯಲ್ಲಿ 1.7 ಪಟ್ಟು ಹೆಚ್ಚಳ ಮತ್ತು ರಫ್ತು ಪ್ರಮಾಣದಲ್ಲಿ 2.6 ಪಟ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ಕರ್ನಾಟಕವನ್ನು ಬಿಟ್ಟು ಎಲ್ಲಾ ಕಂಪನಿಗಳು ಇನ್ನಿತರ ರಾಜ್ಯಗಳಿಗೆ ಹೋಗುತ್ತಿದ್ದು ಇದಕ್ಕೆ ರಾಜ್ಯ ಸರಕಾರದ ಕಠೀಣ ಧೋರಣೆ ಅಂತ ಹೇಳಬಹುದು. ಗುಜರಾತ್ ನಲ್ಲಿ ಮಾರುತಿ ಸುಜುಕಿ ಮಾತ್ರವಲ್ಲದೇ ಟಾಟಾ ಮೋಟಾರ್ಸ್, ಎಂಜಿ ಮೋಟಾರ್ ಇಂಡಿಯಾ, ಮಹೀಂದ್ರಾ ಮತ್ತು ಹೀರೋ ಮೋಟೋಕಾರ್ಪ್ ಸೇರಿದಂತೆ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಇದೀಗ ಹೊಸದಾಗಿ ಆರಂಭವಾಗಲಿರುವ ಮಾರುತಿ ಸುಜುಕಿ ಹೊಸ ಇವಿ ಕಾರು ಉತ್ಪಾದನಾ ಘಟಕವು ಎಲೆಕ್ಟ್ರಿಕ್ ಕಾರ್ ಹಬ್ ಆಗಿ ಹೊರಹೊಮ್ಮಲು ನೆರವಾಗಲಿದೆ ಎನ್ನಬಹುದು.

