ಮಡಿಕೇರಿ : ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನೊಬ್ಬ ಚಾಲನೆ ಮಾಡುವಾಗಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ದಾರುಣ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಬಳಿ ನಡೆದಿದೆ.


ಮೃತರನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಖಾಸಗಿ ಬಸ್ ಗುರುವಾರ ರಾತ್ರಿ ಬೆಂಗಳೂರಿನಿಂದ ಹೊರಟು ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುತ್ತಿತ್ತು. ಬಸ್ನಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು, ಶುಕ್ರವಾರ ಮುಂಜಾನೆ ಕಾಟಕೇರಿ ಸಮೀಪದ ತಿರುವಿನಲ್ಲಿ ಸಾಗುವ ವೇಳೆ ಚಾಲಕ ಶಿವಕುಮಾರ್ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಲು ಆರಂಭಿಸಿತು. ಆದರೆ ಕೊನೆಯ ಕ್ಷಣದಲ್ಲೂ ಪ್ರಜ್ಞೆ ಕಳೆದುಕೊಳ್ಳುವ ಮುನ್ನ ಚಾಲಕ ಬಸ್ನ್ನು ರಸ್ತೆ ಬದಿಗೆ ತಿರುಗಿಸಲು ಯತ್ನಿಸಿದ್ದು, ಬಳಿಕ ಬಸ್ ಮಣ್ಣಿನ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಅಷ್ಟರಲ್ಲಿ ಶಿವಕುಮಾರ್ ಚಾಲಕನ ಆಸನದಲ್ಲೇ ಮೃತಪಟ್ಟಿದ್ದರು.
ಘಟನೆಯಲ್ಲಿ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ಕಾರ್ಯಾಚರಣೆ ನಡೆಸಿದರು.ಚಾಲಕ ಸಮಯಪ್ರಜ್ಞೆಯಿಂದ ಬಸ್ನ್ನು ಬದಿಗೆ ತಿರುಗಿಸಿದ್ದರಿಂದ ದೊಡ್ಡ ದುರಂತ ತಪ್ಪಿ ಹಲವು ಪ್ರಯಾಣಿಕರ ಜೀವ ಉಳಿದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.


