Friday, September 11, 2026
Homeಜಿಲ್ಲೆಮಂಗಳೂರು : SIR ನೋಟೀಸ್ ಕಳವಳ : ವಿದೇಶದಲ್ಲಿರುವ ಸಾವಿರಾರು ಕರಾವಳಿ ವೋಟರ್ಸ್‌ಗೆ ಸಂಕಷ್ಟ..!

ಮಂಗಳೂರು : SIR ನೋಟೀಸ್ ಕಳವಳ : ವಿದೇಶದಲ್ಲಿರುವ ಸಾವಿರಾರು ಕರಾವಳಿ ವೋಟರ್ಸ್‌ಗೆ ಸಂಕಷ್ಟ..!

ಮಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ SIR (Special Intensive Revision) ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಲ್ಲಿ ಆತಂಕ ಹೆಚ್ಚಾಗಿದೆ. ಉದ್ಯೋಗ, ವ್ಯವಹಾರ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶಗಳಲ್ಲಿ ನೆಲೆಸಿರುವ ಕರಾವಳಿಯ ಸಾವಿರಾರು ಮತದಾರರಿಗೆ ಚುನಾವಣಾ ಅಧಿಕಾರಿಗಳಿಂದ ನೋಟಿಸ್ ಜಾರಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.

ಯುಎಇ, ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಉದ್ಯೋಗ ಹಾಗೂ ವ್ಯವಹಾರ ನಡೆಸುತ್ತಿರುವ ಕರಾವಳಿಗರು SIR ನೋಟಿಸ್‌ ಪಡೆದಿದ್ದಾರೆ ಎನ್ನಲಾಗಿದೆ. ಮತದಾರರ ವಿವರಗಳಲ್ಲಿ ಕಂಡುಬಂದಿರುವ ವ್ಯತ್ಯಾಸಗಳು ಹಾಗೂ ದಾಖಲೆಗಳ ಪರಿಶೀಲನೆ ಹಿನ್ನೆಲೆಯಲ್ಲಿ ಕೆಲವರಿಗೆ ನೋಟಿಸ್ ನೀಡಲಾಗಿದ್ದು, ಮೂಲ ದಾಖಲೆಗಳೊಂದಿಗೆ ಖುದ್ದು ಹಾಜರಾಗಿ ವಿಚಾರಣೆ ಹಾಗೂ ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಏಳು ದಿನಗಳಲ್ಲಿ ಹಾಜರಾಗದಿದ್ದರೆ ಹೆಸರು ಡಿಲೀಟ್?.

ನೋಟಿಸ್‌ನಲ್ಲಿ ಸೂಚಿಸಿರುವ ಅವಧಿಯೊಳಗೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇದೆ ಎಂಬ ಆತಂಕ ಅನಿವಾಸಿ ಮತದಾರರಲ್ಲಿ ಮೂಡಿದೆ. ಈಗಾಗಲೇ ವಿದೇಶಗಳಲ್ಲಿ ಉದ್ಯೋಗ ಹಾಗೂ ವ್ಯಾಪಾರದಲ್ಲಿರುವ ಹಲವರು ನೋಟಿಸ್ ಪಡೆದಿದ್ದು, ತಕ್ಷಣ ಭಾರತಕ್ಕೆ ಆಗಮಿಸುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ.
ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು, ಕೇವಲ SIR ನೋಟಿಸ್‌ಗಾಗಿ ಕರ್ನಾಟಕಕ್ಕೆ ಪ್ರಯಾಣಿಸುವುದು ಪ್ರಾಯೋಗಿಕವಾಗಿ ಹಾಗೂ ಆರ್ಥಿಕವಾಗಿ ಕಷ್ಟಕರ ಎಂದು ಹೇಳುತ್ತಿದ್ದಾರೆ.

ಉದ್ಯೋಗದಲ್ಲಿರುವವರಿಗೆ ತಕ್ಷಣ ರಜೆ ಪಡೆಯುವುದು ಸಾಧ್ಯವಾಗದಿರುವುದಲ್ಲದೆ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ವೆಚ್ಚವೂ ಹೆಚ್ಚುವರಿ ಹೊರೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ವರ್ಚುವಲ್ ಹಾಜರಾತಿಗೆ ಮನವಿ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ (KNRI) ಸೇರಿದಂತೆ ಅನಿವಾಸಿ ಕನ್ನಡಿಗರ ಸಂಘಟನೆಗಳು ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಮೂಲಕ ಚುನಾವಣಾ ಆಯೋಗದ ಗಮನ ಸೆಳೆಯಲು ಮುಂದಾಗಿವೆ.
ಕೇರಳದಲ್ಲಿ ಅನುಸರಿಸಲಾಗುತ್ತಿರುವ ಮಾದರಿಯಂತೆ, ವಿದೇಶದಲ್ಲಿರುವ ಮತದಾರರಿಗೆ ವರ್ಚುವಲ್ ಹಾಜರಾತಿ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ದಾಖಲೆ ಪರಿಶೀಲನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ಅನಿವಾಸಿ ಕನ್ನಡಿಗರಿಗೆ ತಕ್ಷಣ ಕರ್ನಾಟಕಕ್ಕೆ ಆಗಮಿಸುವುದು ಸಾಧ್ಯವಿಲ್ಲ. ಹೀಗಾಗಿ ಅವರ ಉದ್ಯೋಗ, ಪ್ರಯಾಣದ ವೆಚ್ಚ ಹಾಗೂ ಇತರ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಗಣಿಸಿ ಆನ್‌ಲೈನ್ ಮೂಲಕ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಬೇಕು ಎಂಬುದು ಮನವಿಯ ಪ್ರಮುಖ ಬೇಡಿಕೆಯಾಗಿದೆ.

ಚುನಾವಣಾ ಆಯೋಗದ ಅಧಿಕೃತ ಆದೇಶಕ್ಕೆ ಕಾಯುತ್ತಿರುವ ಅನಿವಾಸಿಗಳು ಈ ಕುರಿತು ಅನಿವಾಸಿ ಕನ್ನಡಿಗರ ಪರವಾಗಿ ಮನವಿ ಸಲ್ಲಿಸಲಾಗಿದ್ದರೂ, ವರ್ಚುವಲ್ ಹಾಜರಾತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಈವರೆಗೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ ಎಂದು ತಿಳಿದುಬಂದಿದೆ.

ಇದರಿಂದ SIR ನೋಟಿಸ್ ಪಡೆದಿರುವ ವಿದೇಶಿ ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಇತರ ಅನಿವಾಸಿ ಮತದಾರರಲ್ಲಿ ಗೊಂದಲ ಮುಂದುವರಿದಿದೆ. ಅನಿವಾಸಿ ಮತದಾರರ ಹಕ್ಕು ಉಳಿಯುತ್ತದೆಯೇ ಅಥವಾ SIR ಪ್ರಕ್ರಿಯೆಯಲ್ಲಿ ಸಾವಿರಾರು ಹೆಸರುಗಳು ಮತದಾರರ ಪಟ್ಟಿಯಿಂದ ಹೊರಬೀಳುತ್ತವೆಯೇ? ಎಂಬ ಪ್ರಶ್ನೆ ಇದೀಗ ಮಹತ್ವ ಪಡೆದುಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular