ಮಂಗಳೂರು : ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು MDMA ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಮಾರು ₹24 ಲಕ್ಷ ಮೌಲ್ಯದ 240 ಗ್ರಾಂ MDMA ಸೇರಿದಂತೆ ಒಟ್ಟು ₹29.80 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 26ರಂದು ಸಂಜೆ ಉಳ್ಳಾಲ ತಾಲೂಕು ಮುಡಿಪು ಕಾಯರ್ಗೋಳಿ ಕ್ರಾಸ್ ಬಳಿ CCB ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಬೆಂಗಳೂರು ನಗರದಿಂದ MDMA ಖರೀದಿಸಿ ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ CCB ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತರನ್ನು ಮುಡಿಪು ನಿವಾಸಿಗಳಾದ ನವಾಜ್ @ ನವ್ವಾ @ ಮುಡಿಪು ನವಾಜ್ (35), ಮೊಹಮ್ಮದ್ ಆರೀಫ್ ಎನ್. (36) ಹಾಗೂ ಲಾಯ್ಡ್ ಡಿಸೊಜಾ (35) ಎಂದು ಗುರುತಿಸಲಾಗಿದೆ.
ಬಂಧಿತರಿಂದ 240 ಗ್ರಾಂ MDMA – ಅಂದಾಜು ₹24 ಲಕ್ಷ ಮೌಲ್ಯ 4 ಮೊಬೈಲ್ ಫೋನ್ಗಳು
MDMA ಸಾಗಾಟಕ್ಕೆ ಬಳಸಿದ್ದ ಟೆಂಪೋ ವಾಹನ
ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹29.80 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನವಾಜ್ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಬೆದರಿಕೆ, ಕೊಲೆಯತ್ನ, ಅಪಹರಣ, ಅತ್ಯಾಚಾರ, ವಂಚನೆ, ಮೋಸ, ದನಗಳ್ಳತನ ಹಾಗೂ ಮಾದಕವಸ್ತು ಮಾರಾಟ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 16 ಪ್ರಕರಣಗಳು ದಾಖಲಾಗಿವೆ.
ಕೊಣಾಜೆ ಪೊಲೀಸ್ ಠಾಣೆ – 12 ಪ್ರಕರಣ ಉಳ್ಳಾಲ ಪೊಲೀಸ್ ಠಾಣೆ – 2 ಪ್ರಕರಣ ಮುಲ್ಕಿ ಪೊಲೀಸ್ ಠಾಣೆ – 1 ಪ್ರಕರಣ
ಸುರತ್ಕಲ್ ಪೊಲೀಸ್ ಠಾಣೆ – 1 ಪ್ರಕರಣ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ತಲಾ ಎರಡು ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ಆರೋಪಿಗಳಿಗಾಗಿ ಶೋಧ ಈ MDMA ಮಾರಾಟ ಹಾಗೂ ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ.ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳೂರು CCB ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

