ಮಂಗಳೂರು : ನಗರದ ಹೊರವಲಯದ ಸುರತ್ಕಲ್ ಮಾದವನಗರದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ STP ಜಾಗದಲ್ಲಿ ಹತ್ತಾರು ಮರಗಳನ್ನು ಕಡಿದು ಸಾಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ಮುಖಂಡರು ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.



ಪಾಲಿಕೆಯಿಂದ STP ಜಾಗಕ್ಕೆ ಕಾಂಪೌಂಡ್ ನಿರ್ಮಾಣದ ಗುತ್ತಿಗೆ ನೀಡಲಾಗಿತ್ತು ಎನ್ನಲಾಗಿದ್ದು, ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ಸಾಗುವಾನಿ, ಹೆಬ್ಬಲಸು, ಹಲಸು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಕಡಿದು ಸಾಗಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಡಿದ ಮರಗಳನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮಾಜಿ ಕಾರ್ಪೊರೇಟರ್ ಹಾಗೂ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ ಮತ್ತು ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಪುಪ್ಪರಾಜ್ ಮುಕ್ಕ ಅವರ ವಿರುದ್ಧ ದೂರು ನೀಡಲಾಗಿದೆ. ಈ ಕುರಿತು ಮುಖ್ಯಮಂತ್ರಿ, ಅರಣ್ಯ ಸಚಿವರು, ಅರಣ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಕಾಂಗ್ರೆಸ್ ದೂರು ಸಲ್ಲಿಸಿದೆ.
ಮಂಗಳೂರು ಮಹಾನಗರ ಪಾಲಿಕೆಯ ಕಡೆಯಿಂದಲೂ ಅರಣ್ಯ ಇಲಾಖೆಯ RFOಗೆ ದೂರು ನೀಡಲಾಗಿದೆ. ದೂರಿನ ಆಧಾರದ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ಈಗಾಗಲೇ ಶೇ.50ರಷ್ಟು ಮರಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಮರಗಳ ಕಡಿತಕ್ಕೆ ಅನುಮತಿ ಇತ್ತೇ? ಕಡಿದ ಮರಗಳನ್ನು ಎಲ್ಲಿಗೆ ಸಾಗಿಸಲಾಗಿದೆ? ಮರಗಳ ಮಾರಾಟದಿಂದ ಹಣ ಪಡೆದವರು ಯಾರು? ಎಂಬುದರ ಕುರಿತು ತನಿಖೆ ಮುಂದುವರಿದಿದೆ.

