Tuesday, July 14, 2026
Homeಜಿಲ್ಲೆಮಂಗಳೂರು : ವಿಶೇಷ ಮಕ್ಕಳ ಪ್ರತಿಭೆಗೆ ವೇದಿಕೆಯಾದ ‘ವೈವಿಧ್ಯಂ–2026’ ನೃತ್ಯ ಸ್ಪರ್ಧೆ.

ಮಂಗಳೂರು : ವಿಶೇಷ ಮಕ್ಕಳ ಪ್ರತಿಭೆಗೆ ವೇದಿಕೆಯಾದ ‘ವೈವಿಧ್ಯಂ–2026’ ನೃತ್ಯ ಸ್ಪರ್ಧೆ.

ಮಂಗಳೂರು : ಅಶ್ರಯ ಆಂಗನ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ವಿಶೇಷ ಮಕ್ಕಳಿಗಾಗಿ ಆಯೋಜಿಸಲಾದ ‘ವೈವಿಧ್ಯಂ–2026’ ನೃತ್ಯ ಸ್ಪರ್ಧೆಯು ಮಂಗಳೂರಿನ ಟೌನ್ ಹಾಲ್‌ನಲ್ಲಿ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.

ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಅದ್ಭುತ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಶೇಷ ಮಕ್ಕಳಲ್ಲಿರುವ ಕಲಾ ಸಾಮರ್ಥ್ಯವನ್ನು ಸಮಾಜದ ಮುಂದೆ ಅನಾವರಣಗೊಳಿಸುವುದರ ಜೊತೆಗೆ, ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ತಂಡವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮವನ್ನು ಕರಾವಳಿ ಗ್ರೂಪ್ ಆಫ್ ಕಾಲೇಜುಗಳ ಸಂಸ್ಥಾಪಕ ಅಧ್ಯಕ್ಷ ಶ್ರೀ ಗಣೇಶ್ ಎಸ್. ರಾವ್ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಶ್ರೀ ವಿನಯ್ ಭಟ್ ಅಧ್ಯಕ್ಷತೆ ವಹಿಸಿದ್ದರು. ದೈಜಿವರ್ಲ್ಡ್‌ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಶ್ರೀ ವಾಲ್ಟರ್ ನಂದಳಿಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ಶ್ರೀ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಖ್ಯಾತ ಭರತನಾಟ್ಯ ಕಲಾವಿದೆ ಪ್ರಕ್ಷಿಲಾ ಜೈನ್ ಹಾಗೂ ಖ್ಯಾತ ನಟ, ನೃತ್ಯ ನಿರ್ದೇಶಕ ಎಲ್ಟನ್ ಜಿಫ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ಸ್ಪರ್ಧಿಗಳ ಪ್ರತಿಭೆಯನ್ನು ಮೆಚ್ಚಿ ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ವಿಜೆ ಪೂರ್ವಿ ರಾವ್ ಅಚ್ಚುಕಟ್ಟಾಗಿ ಹಾಗೂ ಉತ್ಸಾಹಭರಿತವಾಗಿ ನಿರೂಪಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು. ಎಲ್ಲಾ ಭಾಗವಹಿಸಿದ ಮಕ್ಕಳಿಗೂ ಪದಕ ಹಾಗೂ ಪ್ರಶಂಸಾ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

“ವಿಶೇಷ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ಪರಿಚಯಿಸಿ, ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಎಲ್ಲರನ್ನೂ ಒಳಗೊಂಡ ಸಮಾನತೆಯ ಸಮಾಜ ನಿರ್ಮಾಣಕ್ಕೆ ಈ ಕಾರ್ಯಕ್ರಮ ಒಂದು ಸಣ್ಣ ಹೆಜ್ಜೆಯಾಗಲಿ ಎಂಬುದು ನಮ್ಮ ಆಶಯ” ಎಂದು ಅಶ್ರಯ ಆಂಗನ್ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಶ್ರೀಮತಿ ಆಶಾ ಕುಮಾರಸ್ವಾಮಿ ರಾವ್ ಹೇಳಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಶ್ರೀ ಬಿಜೋಯ್ ಎ., ವಿವಿಧ ವಿಶೇಷ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು, ಪೋಷಕರು, ಸಮಾಜದ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ರೋಷಣಿ ನಿಲಯ – ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದರು. ಕರ್ನಾಟಕ ಬ್ಯಾಂಕ್‌ನ ಸಹಕಾರ, ಎಲ್ಲಾ ಶಾಲೆಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ಸ್ವಯಂಸೇವಕರ ಸೇವೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

Most Popular