ಮಂಗಳೂರು : ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನನ್ನು ತಲವಾರಿನಿಂದ ಕೊಲೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದ ಮೊದಲ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
2019ರ ಜನವರಿ 3ರಂದು ನಡೆದಿತ್ತು ಕೊಲೆ
2019ರ ಜನವರಿ 3ರಂದು ಪಂಜಿಮೊಗರು ಮಾಲಾಡಿ ರಸ್ತೆಯಲ್ಲಿರುವ ಎಂ.ವಿ. ಶೆಟ್ಟಿ ಕಾಲೇಜಿನ ಬಳಿ ಘಟನೆ ನಡೆದಿತ್ತು. ಪ್ರಕರಣದ ಮೊದಲ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಸುನಿಲ್ ಕುಮಾರ್, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಸೇರಿಕೊಂಡು ರಾಕೇಶ್ನನ್ನು ತಲವಾರುಗಳಿಂದ ಕೊಲೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 02/2019ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಕಲಂ 302, 120(ಬಿ), 201, 212 ಹಾಗೂ 34ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
ಎಸ್ಸಿ 105/2019ರ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದ್ದಾರೆ.
ಆರೋಪಿಗಳಿಗೆ ವಿಧಿಸಿದ ಶಿಕ್ಷೆಯ ವಿವರ:
ಕೊಲೆ ಹಾಗೂ ಕ್ರಿಮಿನಲ್ ಸಂಚಿನ ಆರೋಪಕ್ಕೆ ಸಂಬಂಧಿಸಿದ ಐಪಿಸಿ ಕಲಂ 302, 120(ಬಿ) ಜೊತೆಗೆ 34ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು.
ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಐಪಿಸಿ ಕಲಂ 201 ಜೊತೆಗೆ 34ರ ಅಡಿಯಲ್ಲಿ ಮೂರು ವರ್ಷಗಳ ಕಾರಾವಾಸ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.
ಆರೋಪಿಗೆ ಆಶ್ರಯ ನೀಡಿದ ಆರೋಪಕ್ಕೆ ಸಂಬಂಧಿಸಿದ ಐಪಿಸಿ ಕಲಂ 212 ಜೊತೆಗೆ 34ರ ಅಡಿಯಲ್ಲಿ ಮೂರು ವರ್ಷಗಳ ಕಾರಾವಾಸ ಹಾಗೂ ₹5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.
ದಂಡದ ಹಣ ಮೃತನ ತಂದೆಗೆ ಪರಿಹಾರ
ಒಟ್ಟು ₹70,000 ದಂಡದ ಮೊತ್ತದಲ್ಲಿ ₹20,000ವನ್ನು ಸರ್ಕಾರಕ್ಕೆ ಹಾಗೂ ₹50,000ವನ್ನು ಮೃತ ರಾಕೇಶ್ನ ತಂದೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

