ಸುಳ್ಯ: ಅಡಿಕೆಗೆ ಹಳದಿ ರೋಗ, ಬೇರು ಹುಳ, ಎಲೆ ಚುಕ್ಕಿ ರೋಗದ ಜೊತೆ ಮಾರುಕಟ್ಟೆ ಅಸ್ತಿರತೆ ಅಡಿಕೆ ಬೆಳೆಗಾರನಿಗೆ ಸದಾ ತಲೆ ನೋವು. ಇನ್ನು ರಬ್ಬರ್ ಕೃಷಿ ಬೆಲೆ ಕುಸಿತ, ಕೊಕ್ಕೊ, ತೆಂಗು ಕೃಷಿಯ ಲಾಭ ಅಷ್ಟಕ್ಕಷ್ಟೇ. ಪರ್ಯಾಯ ಕೃಷಿಯಾಗಿ ಏನು ಮಾಡಬೇಕು ಎಂದು ತೋಚದ ಪರಿಸ್ಥಿತಿ. ಹೀಗೆ ಕೃಷಿಯನ್ನೇ ನಂಬಿ ಬದುಕುವ ಸುಳ್ಯ ತಾಲೂಕಿನ ಕೃಷಿಕರ ಕೃಷಿ ಬದುಕು ಸದಾ ತಲ್ಲಣ. ಹಾಗಂತ ಪರ್ಯಾಯ ಕೃಷಿ ಅಥವಾ ಲಾಭದಾಯಕ ಕೃಷಿಯೂ ಹೆಚ್ಚು ಇಲ್ಲಿ ಪ್ರಚಲಿತದಲ್ಲಿಲ್ಲ. ಇಂತಹಾ ಸಂದರ್ಭಗಳಲ್ಲಿ ಅತೀ ಕಡಿಮೆ ವೆಚ್ಚ, ಕಡಿಮೆ ಶ್ರಮ, ಕಡಿಮೆ ಸ್ಥಳದಲ್ಲಿ ಉತ್ತಮ ಆದಾಯ ಗಳಿಸಬಹುದಾದ ಪರ್ಯಾಯ ಕೃಷಿಯೊಂದು ರೈತರಲ್ಲಿ ಆಶಾಕಿರಣ ಮೂಡಿಸಿದೆ. ಚೈನಾ, ಜಪಾನ್, ವಿಯೆಟ್ನಾಂಗಳಲ್ಲಿ ಗುಡಿ ಕಸುಬಾಗಿರುವ, ನಮ್ಮ ದೇಶದಲ್ಲಿಯೂ ವಿವಿಧ ರಾಜ್ಯಗಳಲ್ಲಿ ನಡೆಸುತ್ತಿರುವ ಮುತ್ತು ಕೃಷಿ ಸುಳ್ಯ ತಾಲೂಕಿಗೂ ಎಂಟ್ರಿ ಕೊಟ್ಟಿದೆ. ಸುಳ್ಯ ತಾಲೂಕಿನ ಐವರ್ನಾಡಿನ ಕೃಷಿಕ ನವೀನ್ ಚಾತುಬಾಯಿ ಕಳೆದ ಒಂದು ವರ್ಷದಿಂದ ಮುತ್ತು ಕೃಷಿಯ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ. ತಮ್ಮ ಪ್ರಥಮ ಪ್ರಯೋಗದಲ್ಲೇ ನವೀನ್ ಕೈಗೆ ಒಂದಷ್ಟು ಆದಾಯವನ್ನೂ ತಂದು ಕೊಟ್ಟಿದೆ ಈ ಮುತ್ತುಗಳು.

ಮುತ್ತು ಕೃಷಿ ಮಾಡುವುದು ಹೇಗೆ ?
ಮುತ್ತು ಕೃಷಿಯಲ್ಲಿ ಮುಖ್ಯವಾಗಿ ಮೂರು ವಿಧಗಳು. ಸಮುದ್ರ ನೀರಿನ ಮುತ್ತುಗಳು, ಆರ್ಟಿಫಿಷಿಯಲ್ ಮುತ್ತು ಮತ್ತು ಸಿಹಿನೀರಿನ ಮುತ್ತು ಕೃಷಿ ಅಥವಾ ಕಲ್ಚರ್ಡ್ ಮುತ್ತು. ಸಿಹಿ ನೀರಿನಲ್ಲಿ ಮಾಡುವ ಕಲ್ಚರ್ಡ್ ಪರ್ಲ್ ಸದ್ಯ ನವೀನ್ ಚಾತುಬಾಯಿ ಅವರ ಆಯ್ಕೆ. ಸಣ್ಣದೊಂದು ಕೊಳ ಅಥವಾ ತೊಟ್ಟಿಯ ನೀರಿನ ಹೊಂಡ ಇದ್ದರೆ ಸಾಕು ಈ ಮುತ್ತು ಕೃಷಿ ಮಾಡಬಹುದು. ಸಣ್ಣ ಟ್ಯಾಂಕ್ ತಯಾರಿಸಿ ಅದರಲ್ಲಿ ನೀರು ತುಂಬಿ ಅದಕ್ಕೆ ಸೆಗಣಿ ಮತ್ತು ಕಡ್ಲೆ ಹುಡಿ ಹಾಕಬೇಕು. ಇದರಿಂದ ನೀರಿನಲ್ಲಿ ಪಾಚಿ ಬೆಳೆಯುತ್ತದೆ. ಇದೇ ಪಾಚಿ ಮುತ್ತು ನೀಡುವ ಕಪ್ಪೆ ಚಿಪ್ಪಿನ ಆಹಾರ. ಕಪ್ಪೆ ಚಿಪ್ಪುಗಳನ್ನು ತಂದು ಅದನ್ನು ಉಪ್ಪು ನೀರಿನಲ್ಲಿ ಹಾಕಿ ತೊಳೆದು ಬ್ಯಾಕ್ಟೀರಿಯಾಗಳು ಮತ್ತಿತರ ಅಣುಗಳು ಇದ್ದಲ್ಲಿ ಕ್ಲೀನ್ ಮಾಡಿ ಟ್ರೇಗಳಲ್ಲಿ ಹಾಕಿ ಕೊಳಕ್ಕೆ ಬಿಡಬೇಕು. 25 ರಿಂದ 50 ಕಪ್ಪೆ ಚಿಪ್ಪುಗಳನ್ನು ಒಂದು ಟ್ರೇಯಲ್ಲಿ ಹಾಕಬೇಕು. ಟ್ರೇಯ ಮೇಲೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಲಾಗುತ್ತದೆ. ಸಾಮಾನ್ಯವಾಗಿ 10 ಲೀಟರ್ ನೀರಿಗೆ ಒಂದು ಕಪ್ಪೆ ಚಿಪ್ಪು ಎಂಬಂತೆ 5000 ಲೀಟರ್ ನೀರಿನ ಕೊಳದಲ್ಲಿ 500 ಕಪ್ಪೆ ಚಿಪ್ಪುಗಳನ್ನು ಬೆಳೆಸಬಹುದು. ಈ ನೀರಿನಲ್ಲಿ ಬೆಳೆದ ಪಾಚಿಗಳೇ ಈ ಕಪ್ಪೆ ಚಿಪ್ಪುಗಳಿಗೆ ಆಹಾರವಾಗುತ್ತದೆ. ಇದಕ್ಕೆ ವಿಶೇಷವಾಗಿ ಬೇರೆ ಆಹಾರ ಬೇಕಾಗಿಲ್ಲ.
ಸುಲಭ ನಿರ್ವಹಣೆ :
ಮುತ್ತು ಕೃಷಿಯಲ್ಲಿ ಕೃಷಿಕನಿಗೆ ದೊಡ್ಡ ಶ್ರಮದ ಕೆಲಸ ಯಾವುದೂ ಇಲ್ಲ. ಒಮ್ಮೆ ಕಪ್ಪೆ ಚಿಪ್ಪಿನಲ್ಲಿ ಮುತ್ತು ಬೆಳೆಯಲು ಅನುಕೂಲವಾಗುವ ಅಚ್ಚನ್ನು ಅಳವಡಿಸಿ ನೀರಿನಲ್ಲಿ ಬಿಟ್ಟರೆ ಮುಗಿತು. ಬಳಿಕ ಮೇಲಿನಿಂದಲೇ ಯಾವುದಾದರೂ ಚಿಪ್ಪು ಸತ್ತಿವೆಯಾ ಎಂದು ಪರಿಶೀಲನೆ ಮಾಡುತ್ತಿರಬೇಕು. ತಿಂಗಳಿಗೊಮ್ಮೆ ನೀರಿನ ಪಿಹೆಚ್ ಲೆವೆಲ್ ಪರಿಶೀಲಿಸಿ ಅಗತ್ಯ ಬಿದ್ರೆ ನೀರು ಬದಲಾಯಿಸಿ ಪಾಚಿ ಬೆಳೆಸಿದರೆ ಮುಗಿತು. ಎರಡು ತಿಂಗಳಿಗೊಂದು ಬಾರಿ ಮಾತ್ರ ಈ ಕೆಲಸ ಬರುತ್ತದೆ ಅನ್ನೋದು ಮುತ್ತು ಬೆಳೆಯುವ ನವೀನ್ ಚಾತುಬಾಯಿ ಅವರ ಅಭಿಪ್ರಾಯ.
ಅಲಂಕಾರಿಕ ವಿನ್ಯಾಸ ಅಳವಡಿಕೆ:
ಮುತ್ತು ಕೃಷಿ ಮಾಡುವುದರಲ್ಲಿ ಕಪ್ಪೆ ಚಿಪ್ಪಿನ ಒಳಗೆ ಒಂದು ಡೈ ಅಳವಡಿಸಲಾಗುತ್ತದೆ. ಇದು ಮುತ್ತು ಪಡೆಯಲು ಇರುವ ಪ್ರಮುಖ ಹಾಗೂ ನಾಜೂಕು ಕೆಲಸ. ಮಾರುಕಟ್ಟೆಯಲ್ಲಿ ಡಿಮಾಂಡ್ ಇರೋ ವಿನ್ಯಾಸಗಳ ಡೈ ಅಳವಡಿಸುವ ಮೂಲಕ ತಮಗೆ ಬೇಕಾದ ವಿನ್ಯಾಸದ ಮುತ್ತು ಪಡೆಯಬಹುದು. ಅಕ್ರೆಲಿಕ್ ಪೌಢರ್‌ನಿಂದ ತಯಾರಿಸಿದ ಇಂತಹ ಡೈ ಕಪ್ಪೆ ಚಿಪ್ಪಿನ ಒಳಗೆ ಅಳವಡಿಸಲಾಗುತ್ತದೆ. ಒಂದು ಕಪ್ಪೆ ಚಿಪ್ಪಿನಲ್ಲಿ ಎರಡು ಡೈ ಅಳವಡಿಸಿ ಎರಡು ಮುತ್ತು ಪಡೆಯಬಹುದು. ಕಪ್ಪೆ ಚಿಪ್ಪುಗಳನ್ನು ಕೊಳದಿಂದ ಹೊರ ತೆಗೆದು ಲವಂಗ ಎಣ್ಣಿ ಬೆರೆಸಿದ ನೀರಿನಲ್ಲಿ ಒಂದು ಗಂಟೆ ಹಾಕಿಡಬೇಕು. ಇದರಿಂದ ಕಪ್ಪೆ ಚಿಪ್ಪಿಗೆ ಅನಸ್ತೇಶಿಯಾ ನೀಡಿದಂತಾಗುತ್ತದೆ. ಬಳಿಕ ಒಂದು ಗಂಟೆಯೊಳಗೆ ಕಪ್ಪೆ ಚಿಪ್ಪಿನಲ್ಲಿ ಡೈ ಅಳವಡಿಸಬೇಕು. ಕಪ್ಪೆ ಚಿಪ್ಪನ್ನು ಮೆಲ್ಲಗೆ ತೆರೆದು ಎರಡೂ ಬದಿಗಳಲ್ಲಿ ಒಂದೊಂದು ಡೈ ಅಳವಡಿಸಬಹುದು. ಶಿವ, ಗಣಪತಿ, ಶಿಲುಬೆ, ಅರ್ಧ ಚಂದ್ರಾಕೃತಿ ಹೀಗೆ ನಮಗೆ ಬೇಕಾದ ಡೈ ಅಳವಡಿಸಬಹುದು. ಬಳಿಕ ಕಪ್ಪೆ ಚಿಪ್ಪುಗಳನ್ನು ಟ್ರೇಯಲ್ಲಿ ಹಾಕಿ ಟ್ಯಾಂಕ್ ಒಳಗೆ ತೇಲಿ ಬಿಡಬೇಕು. ಬಳಿಕ ಒಂದು ವರ್ಷಗಳ ಕಾಲ ಈ ಕಪ್ಪೆ ಚಿಪ್ಪುಗಳನ್ನು ಕೊಳದಲ್ಲಿ ಸಾಕಬೇಕು. ಕಪ್ಪೆ ಚಿಪ್ಪಿನಲ್ಲಿ ಉತ್ಪತ್ತಿಯಾಗುವ ನ್ಯಾಕ್ರೆ ಎಂಬ ರಸ ಇದರ ಮೇಲೆ ಸವರಿ ಒಂದು ವರ್ಷದೊಳಗೆ ಸುಂದರವಾದ ಮುತ್ತುಗಳು ರೂಪುಗೊಳ್ಳುತ್ತದೆ. ವರ್ಷದ ಬಳಿಕ ಚಿಪ್ಪು ಸಮೇತ ಡ್ರಿಲ್ ಮಾಡಿ ಮುತ್ತುಗಳನ್ನು ಪಡೆಯಬಹುದು. ಒಂದು ಜೋಡಿ ಮುತ್ತಿಗೆ ರೂ 300 ದರ ಇದೆ ಎಂದು ಮುತ್ತು ಕೃಷಿಯ ವಿವಿಧ ಹಂತಗಳನ್ನು ವಿವರಿಸುತ್ತಾರೆ ನವೀನ್ ಚಾತುಬಾಯಿ.
ಸಚಿವ ಅಂಗಾರರ ಸಲಹೆ-ಜಿಕೆವಿಕೆ ತರಬೇತಿ:
ಸುಳ್ಯ ಶಾಸಕರಾದ ಎಸ್.ಅಂಗಾರ ಅವರು ಮೀನುಗಾರಿಕಾ ಸಚಿವರಾದ ಬಳಿಕ ಒಳನಾಡು ಮೀನುಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಒಳನಾಡು ಮೀನುಗಾರಿಕೆಯ ಜೊತೆಗೆ ಮುತ್ತು ಕೃಷಿ ನಡೆಸುವಂತೆ ಸಚಿವರು ಸಭೆಯೊಂದರಲ್ಲಿ ಸಲಹೆ ನೀಡಿದ್ದರು. ಅದನ್ನು ಕೇಳಿದ್ದ ನವೀನ್ 2021ರಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಹಿ ನೀರಿನಲ್ಲಿ ಮುತ್ತು ಕೃಷಿ ನಡೆಸುವ ಬಗ್ಗೆ ತರಬೇತಿ ಪಡೆದಿದ್ದರು. ಬಳಿಕ ಒಂದು ಚಿಪ್ಪಿಗೆ 10 ರೂಗಳಂತೆ 600 ಕಪ್ಪೆ ಚಿಪ್ಪುಗಳನ್ನು ತಂದು ಕೃಷಿ ಆರಂಭಿಸಿದ್ದರು.ವಿವಿಧ ಕಡೆಗಳಲ್ಲಿ ಭೇಟಿ ನೀಡಿ ಮತ್ತು ಆನ್ ಲೈನ್ ಮೂಲಕ ಈ ಕೃಷಿಯ ಬಗ್ಗೆ ಹೆಚ್ಚು ಅಧ್ಯಯನ ನಡೆಸಿದ್ದಾರೆ. ಒಂದು ವರ್ಷದ ಬಳಿಕ ಸುಮಾರು 500 ಚಿಪ್ಪುಗಳಿಂದ ಮುತ್ತನ್ನು ಮಾರಾಟ ಮಾಡಿದ್ದಾರೆ. ಒಂದು ಲಕ್ಷ ಆದಾಯ ಬಂದಿದೆ. ಸುಮಾರು 40 ಸಾವಿರ ಖರ್ಚು ತಗಲಿದೆ. ಚಿಪ್ಪುಗಳಲ್ಲಿ ಶೇ.25 ರಷ್ಟು ಸಾಯುವ ಸಂಭವವೂ ಇದೆ ಎನ್ನುತ್ತಾರೆ ನವೀನ್ ಚಾತುಬಾಯಿ. ಮುತ್ತು ಕೃಷಿಯನ್ನು ಮುಂದುವರಿಸುವ ಇಂಗಿತವನ್ನು ಅವರು ವ್ಯಕ್ತಪಡಿಸುತ್ತಾರೆ.
ಆಭರಣಗಳ ಹೊಳಪು:
ಮುತ್ತುಗಳನ್ನು ಆಭರಣಗಳ ತಯಾರಿಕೆಗೆ ಹೆಚ್ಚಾಗಿ ಬೆಳೆಸುತ್ತಾರೆ. ಆಭರಣಗಳ ಪೆಂಡೆಂಟ್, ಸರ ಮತ್ತಿತರ ಆಲಂಕಾರಿಕ ವಸ್ತುಗಳ ತಯಾರಿಕೆಗೆ ಇದು ಬಲು ಬೇಡಿಕೆ. ಚೈನಾ, ಜಪಾನ್, ವಿಯೆಟ್ನಾಂಗಳಲ್ಲಿ ಸಿಹಿ ನೀರಿನ ಮುತ್ತು ಕೃಷಿ ಬಲು ಜನಪ್ರಿಯ. ಭಾರತದಲ್ಲಿ ಒಡಿಸ್ಸಾ, ಮಹಾರಾಷ್ಟ್ರ, ಹೈದರಾಬಾದ್‌ಗಳಲ್ಲಿ ಮಾಡಲಾಗುತ್ತಿದೆ. ಅತ್ಯಂತ ಸುಲಭವಾಗಿ ಮಾಡಬಹುದಾದ ಮುತ್ತು ಕೃಷಿಗೆ ವಿಫುಲ ಅವಕಾಶವೇ ಇದೆ ಎಂದು ಈ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನ ನಡೆಸಿದವರು ಅಭಿಪ್ರಾಯ ಪಡುತ್ತಾರೆ.
ಒಳನಾಡು ಮೀನು ಕೃಷಿಗೂ ಸೈ:
ಕಪ್ಪೆ ಚಿಪ್ಪು ಸಾಕುವ ಕೊಳದಲ್ಲಿ ಮೀನುಗಳನ್ನೂ ಸಾಕಬಹುದು ಎನ್ನುತ್ತಾರೆ ನವೀನ್. ಸುಳ್ಯದ ಮಹಶೀರ್ ಮತ್ಸ್ಯ ಉತ್ಪಾದಕರ ಕಂಪೆನಿಯ ನಿರ್ದೇಶಕರೂ ಆಗಿರುವ ನವೀನ್ ಚಾತುಬಾಯಿ ಮೀನು ಸಾಕಣೆಯನ್ನೂ ಮಾಡುತ್ತಾರೆ. ತಿಲಾಫಿಯ, ಕಾಟ್ಲಾ, ರೋಹ್ ಮತ್ತಿತರ ಪ್ರಭೇದದ ಒಂದು ಸಾವಿರ ಮೀನುಗಳ ಕೃಷಿ ಮಾಡುತ್ತಾರೆ. ಮುತ್ತು ಕೃಷಿ ನಡೆಸುವ ಕೊಳದಲ್ಲಿಯೇ ಮೀನು ಮರಿಗಳನ್ನೂ ಬಿಟ್ಟಿದ್ದಾರೆ. ಸ್ವಲ್ಪ ಬೆಳೆದ ಮೀನುಗಳನ್ನು ಬಳಿಕ ತಮ್ಮ ತೋಟದ ಕೆರೆಯಲ್ಲಿ ಹಾಕಿ ಸಾಕುತ್ತಿದ್ದಾರೆ. ಆ ಮೂಲಕ ಮೀನುಗಾರಿಕೆ ಮೂಲಕವೂ ಆದಾಯ ಗಳಿಸಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದಾರೆ. ಒಟ್ಟಾರೆ ನವೀನ್ ಚಾತುಬಾಯಿ ಅವರು ಪ್ರಾಯೋಗಿಕವಾಗಿ ಮುತ್ತು ಕೃಷಿ ಆರಂಭಸಿ ಯಶಸ್ಸು ಕಂಡಿದ್ದಾರೆ. ಹೀಗಾಗಿ ಇದೇ ಕೃಷಿಯನ್ನು ಇನ್ನಷ್ಟು ವಿಸ್ತರಿಸುವ ಹಾಗೂ ರೈತರಿಗೆ ತಲುಪಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದಾರೆ.