Friday, August 7, 2026
Homeಜಿಲ್ಲೆಮಂಗಳೂರು : ಮನೆಯೊಳಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ-ದರೋಡೆ : 3 ದಿನದಲ್ಲೇ ಆರೋಪಿಗಳ ಬಂಧನ;...

ಮಂಗಳೂರು : ಮನೆಯೊಳಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ-ದರೋಡೆ : 3 ದಿನದಲ್ಲೇ ಆರೋಪಿಗಳ ಬಂಧನ; ₹3 ಲಕ್ಷ ಮೌಲ್ಯದ ಚಿನ್ನಾಭರಣ ವಶ.

ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 76 ವರ್ಷದ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಕೇವಲ ಮೂರು ದಿನಗಳಲ್ಲೇ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಗಸ್ಟ್ 3ರಂದು ಮಧ್ಯಾಹ್ನ ಸುಮಾರು 1.15ರ ವೇಳೆ, ಮನೆ ಬಾಡಿಗೆ ವಿಚಾರಿಸುವ ನೆಪದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಬಲವಂತವಾಗಿ ಮನೆಯೊಳಗೆ ನುಗ್ಗಿ ವೃದ್ಧೆಯನ್ನು ಕೆಳಕ್ಕೆ ತಳ್ಳಿ ಹಲ್ಲೆ ನಡೆಸಿ, ಅವರ ಕುತ್ತಿಗೆಯ ಚಿನ್ನದ ಸರ ಹಾಗೂ ಬಳೆಯನ್ನು ಕಸಿದು ಪರಾರಿಯಾಗಿದ್ದರು. ದೋಚಿದ ಚಿನ್ನಾಭರಣದ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ₹3 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ತನಿಖಾ ತಂಡವು ಖಚಿತ ಮಾಹಿತಿಯ ಆಧಾರದ ಮೇಲೆ ಆಗಸ್ಟ್ 7ರಂದು ಮರೋಳಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು ಉರ್ವ ನಿವಾಸಿ ಬಾಲ ಸುಬ್ರಮಣ್ಯ (49) ಹಾಗೂ ಮಣ್ಣಗುಡ್ಡ ನಿವಾಸಿ,
ಶ್ಯಾಮ್ ಕುಮಾರ್ (33) ಎಂದು ತಿಳಿದಿದೆ. ಬಂಧಿತರಿಂದ ದರೋಡೆ ಮಾಡಿದ್ದ ಸಂಪೂರ್ಣ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆಯೇ ಬಜಪೆ, ಮುಲ್ಕಿ, ಮಂಗಳೂರು ಪೂರ್ವ, ಮಂಗಳೂರು ಉತ್ತರ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಸುಲಿಗೆ ಮತ್ತು ಕಳವು ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular