ಮಂಗಳೂರು : ಬೆಂಗಳೂರು–ಮಂಗಳೂರು ನಡುವೆ ಪ್ರಸ್ತಾವಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಸಕಲೇಶಪುರ ಘಾಟ್ ಮಾರ್ಗದಲ್ಲಿ ಯಶಸ್ವಿಯಾಗಿ ನಡೆಯಿತು.
ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗದಿಂದ ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆವರೆಗೆ ಟ್ರಯಲ್ ರನ್ ನಡೆಸಲಾಗಿದ್ದು, ಘಾಟ್ನ ಕಡಿದಾದ ಏರು-ಇಳಿಜಾರು ಹಾಗೂ ಕಠಿಣ ತಿರುವುಗಳಲ್ಲಿ ರೈಲಿನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಪರೀಕ್ಷಿಸಲಾಯಿತು. ಪ್ರಯಾಣಿಕರ ತೂಕವನ್ನು ಅನುಕರಿಸಲು ಬೋಗಿಗಳಲ್ಲಿ ಮರಳು ಚೀಲಗಳನ್ನು ತುಂಬಿಸಿ ವಿವಿಧ ವೇಗಗಳಲ್ಲಿ ರೈಲನ್ನು ಸಂಚರಿಸಲಾಯಿತು. ರೈಲಿನ ಗರಿಷ್ಠ ಸುರಕ್ಷಿತ ವೇಗವನ್ನು ನಿರ್ಧರಿಸಲು ಮತ್ತಷ್ಟು ಪರೀಕ್ಷೆಗಳು ನಡೆಯಲಿವೆ.
ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿರುವ ಬೆಂಗಳೂರು–ಮಂಗಳೂರು ವಂದೇ ಭಾರತ್ ಸೇವೆ ಆರಂಭಿಸುವ ಮುನ್ನ ಈ ಪರೀಕ್ಷೆಗಳು ಮಹತ್ವ ಪಡೆದಿವೆ.

