ಮಂಗಳೂರು : ಸಾಮಾನ್ಯವಾಗಿ ಬಸ್ ತಂಗುದಾಣಗಳು ಪ್ರಯಾಣಿಕರಿಗೆ ನೆರಳಿನ ಆಸರೆಯಾಗಿರುತ್ತವೆ. ಆದರೆ ಮಂಗಳೂರು ನಗರ ಹೊರವಲಯದ ಗುರುಪುರ ಸಮೀಪದ ಬಂಡಸಾಲೆಯಲ್ಲಿ ನಿರ್ಮಾಣಗೊಂಡಿರುವ ಬಸ್ ತಂಗುದಾಣ ತನ್ನ ವಿಶಿಷ್ಟ ವಿನ್ಯಾಸದಿಂದ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಬಸ್‌ನ ಮಾದರಿಯಲ್ಲೇ ನಿರ್ಮಿಸಲಾದ ಈ ತಂಗುದಾಣವನ್ನು ಸ್ಥಳೀಯ ವಿ2 ಗೈಸ್ ಯುವ ಬಳಗ ವಿನೂತನ ಕಲ್ಪನೆಯೊಂದಿಗೆ ರೂಪಿಸಿದೆ. ನಿಜವಾದ ಬಸ್‌ನಂತೆ ಕಾಣುವ ಈ ತಂಗುದಾಣ ಪ್ರಯಾಣಿಕರಷ್ಟೇ ಅಲ್ಲದೆ, ಸ್ಥಳೀಯರು ಮತ್ತು ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿದೆ.
ಸುಮಾರು ₹7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಬಸ್ ತಂಗುದಾಣ ಆಧುನಿಕ ಹಾಗೂ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹಿಂದೆ ಇದೇ ಸ್ಥಳದಲ್ಲಿದ್ದ ಬಸ್ ತಂಗುದಾಣ ಪಾಳುಬಿದ್ದ ಸ್ಥಿತಿಯಲ್ಲಿದ್ದು, ಪ್ರಯಾಣಿಕರಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸುತ್ತಿರಲಿಲ್ಲ. ಈಗ ಹೊಸ ರೂಪದಲ್ಲಿ ನಿರ್ಮಾಣಗೊಂಡಿರುವ ಬಂಡಸಾಲೆ ಬಸ್ ತಂಗುದಾಣ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವುದರ ಜೊತೆಗೆ ಸ್ಥಳದ ಸೌಂದರ್ಯವನ್ನೂ ಹೆಚ್ಚಿಸಿದೆ.
ಸಾಮಾಜಿಕ ಕಾಳಜಿ ಮತ್ತು ಸೃಜನಾತ್ಮಕ ಚಿಂತನೆ ಒಂದಾದಾಗ ಸಾರ್ವಜನಿಕ ಸ್ಥಳಗಳನ್ನೂ ಹೇಗೆ ಆಕರ್ಷಣೆಯ ಕೇಂದ್ರವನ್ನಾಗಿ ರೂಪಿಸಬಹುದು ಎಂಬುದಕ್ಕೆ ಬಂಡಸಾಲೆಯ ಈ ಬಸ್ ಮಾದರಿಯ ತಂಗುದಾಣ ಉತ್ತಮ ಉದಾಹರಣೆಯಾಗಿದೆ. ಸ್ಥಳೀಯ ಯುವಕರ ಈ ಪ್ರಯತ್ನಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

