ಉಡುಪಿ : ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಪುನೀತ್ ಅತ್ತಾವರ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ.
ಇದರನ್ವಯ 2026ರ ಆಗಸ್ಟ್ 14ರಿಂದ ನವೆಂಬರ್ 13ರವರೆಗೆ ಮೂರು ತಿಂಗಳ ಕಾಲ ಪುನೀತ್ ಅತ್ತಾವರ ಅವರು ಉಡುಪಿ ಜಿಲ್ಲೆಯ ಯಾವುದೇ ಭಾಗಕ್ಕೂ ಪ್ರವೇಶಿಸುವಂತಿಲ್ಲ.
ಮಂಗಳೂರು ಅತ್ತಾವರದ ಬ್ರಹ್ಮ ಸಮಾಜದ ಬಳಿಯ ಮುಂಡಪ್ಪ ಕಂಪೌಂಡ್ ನಿವಾಸಿಯಾಗಿರುವ ಪುನೀತ್ ಅತ್ತಾವರ (39), ಮೋಹನ್ ಕೊಟಾರಿ ಅವರ ಪುತ್ರ ಎಂದು ನೋಟೀಸಿನಲ್ಲಿ ಉಲ್ಲೇಖಿಸಲಾಗಿದೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ
ಪ್ರವೇಶ ನಿರ್ಬಂಧದ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದರೆ ಆಗಸ್ಟ್ 13ರಂದು ಮಧ್ಯಾಹ್ನ 12 ಗಂಟೆಯೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಆಕ್ಷೇಪಣೆಯನ್ನು ಆದೇಶ ಜಾರಿಗೊಳಿಸುವ ಸಿಬ್ಬಂದಿಯವರ ಮೂಲಕ ಅಥವಾ udupidc@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
ನಿಗದಿತ ಸಮಯದೊಳಗೆ ಯಾವುದೇ ಆಕ್ಷೇಪಣೆ ಸ್ವೀಕರಿಸದಿದ್ದರೆ, ಪುನೀತ್ ಅತ್ತಾವರ ಅವರಿಂದ ಯಾವುದೇ ಹೇಳಿಕೆ ಅಥವಾ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನೋಟೀಸು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

