ಮಂಗಳೂರು : ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಿಸಿ ತಟ್ಟಿದೆ.
ಮತದಾರರ ಪಟ್ಟಿಯಲ್ಲಿರುವ ಹೆಸರು ಹಾಗೂ ಹಿಂದಿನ SIR ಸಂದರ್ಭದಲ್ಲಿ ನಮೂದಾಗಿದ್ದ ಹೆಸರಿನ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಹಾಜರುಪಡಿಸುವಂತೆ ಹರೇಕಳ ಹಾಜಬ್ಬರಿಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದರು.
ನೋಟಿಸ್ನಲ್ಲಿ, ಹಿಂದಿನ SIR ವೇಳೆ ಸಿದ್ಧಪಡಿಸಲಾದ ಮತದಾರರ ಪಟ್ಟಿಯೊಂದಿಗೆ ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಹೆಸರು ಹೊಂದಾಣಿಕೆಯಾಗುತ್ತಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಭಾರತ ಚುನಾವಣಾ ಆಯೋಗ ಸೂಚಿಸಿರುವಂತೆ ಮೂಲ ದಾಖಲೆಗಳೊಂದಿಗೆ ಸೆ.11ರಂದು ಹರೇಕಳ ಗ್ರಾಮ ಪಂಚಾಯಿತಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ನೋಟಿಸ್ ಕಂಡು ಹಾಜಬ್ಬರಿಗೆ ಅಚ್ಚರಿ ಚುನಾವಣಾ ಅಧಿಕಾರಿಗಳು ಮನೆಗೆ ಬಂದು ನೋಟಿಸ್ ನೀಡಿದಾಗ ಹರೇಕಳ ಹಾಜಬ್ಬರಿಗೆ ಅಚ್ಚರಿಯಾಗಿದೆ.
2000ನೇ ಇಸವಿವರೆಗೆ ಅವರ ದಾಖಲೆಗಳಲ್ಲಿ ಕೇವಲ ‘ಹಾಜಬ್ಬ’ ಎಂಬ ಹೆಸರೇ ಇತ್ತು ಎನ್ನಲಾಗಿದ್ದು, ಬಳಿಕ ಶಾಲೆ ನಿರ್ಮಾಣದ ಮೂಲಕ ಪ್ರಸಿದ್ಧರಾದ ನಂತರ ‘ಹರೇಕಳ ಹಾಜಬ್ಬ’ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಸದ್ಯ ಅವರ ಆಧಾರ್, ಪಾಸ್ಪೋರ್ಟ್, ರೇಷನ್ ಕಾರ್ಡ್ ಸೇರಿದಂತೆ ದಾಖಲೆಗಳಲ್ಲೆಲ್ಲ ಹರೇಕಳ ಹಾಜಬ್ಬ ಎಂಬ ಹೆಸರೇ ನಮೂದಾಗಿದೆ.
4 ಗಂಟೆಯಲ್ಲೇ ನೋಟಿಸ್ ವಾಪಸ್ : ನೋಟಿಸ್ ನೀಡಿದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಮತ್ತೆ ಹಾಜಬ್ಬರ ಮನೆಗೆ ತೆರಳಿ ನೋಟಿಸ್ನ್ನು ವಾಪಸ್ ಪಡೆದಿದ್ದಾರೆ.
ಸುಮಾರು ನಾಲ್ಕು ಗಂಟೆಗಳ ಅವಧಿಯಲ್ಲೇ ನೋಟಿಸ್ ಹಿಂಪಡೆಯಲಾಗಿದ್ದು, ದಾಖಲೆಗಳಲ್ಲಿನ ಹೆಸರು ವ್ಯತ್ಯಾಸವನ್ನು ಅಧಿಕಾರಿಗಳ ಮಟ್ಟದಲ್ಲೇ ಸರಿಪಡಿಸುವುದಾಗಿ ಭರವಸೆ ನೀಡಲಾಗಿದೆ.
ಅಕ್ಷರ ಸಂತನಿಗೆ ನೀಡಲಾಗಿದ್ದ SIR ನೋಟಿಸ್ ಇದೀಗ ವಾಪಸ್ ಪಡೆಯಲಾಗಿದ್ದು, ಹೆಸರು ಬದಲಾವಣೆಯಿಂದ ಉಂಟಾದ ತಾಂತ್ರಿಕ ವ್ಯತ್ಯಾಸವೇ ನೋಟಿಸ್ಗೆ ಕಾರಣ ಎನ್ನಲಾಗಿದೆ.
ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಅಕ್ಷರ ಸಂತ ಹರೇಕಳ ಹಾಜಬ್ಬರಿಗೂ SIR ನೋಟಿಸ್ ಬಂದಿರುವುದು ಇದೀಗ ಗಮನ ಸೆಳೆದಿದೆ.

