Thursday, September 24, 2026
Homeಜಿಲ್ಲೆಮಂಗಳೂರು : ಧಕ್ಕೆಯಲ್ಲಿ ಸ್ಥಳಾವಕಾಶದ ಕೊರತೆ,1000 ಮೀಟರ್ ಜೆಟ್ಟಿ ಅಭಿವೃದ್ಧಿಗೆ ವೇಗ ನೀಡಲು ಮೀನುಗಾರರ ಆಗ್ರಹ.

ಮಂಗಳೂರು : ಧಕ್ಕೆಯಲ್ಲಿ ಸ್ಥಳಾವಕಾಶದ ಕೊರತೆ,1000 ಮೀಟರ್ ಜೆಟ್ಟಿ ಅಭಿವೃದ್ಧಿಗೆ ವೇಗ ನೀಡಲು ಮೀನುಗಾರರ ಆಗ್ರಹ.

ಮಂಗಳೂರು : ವರ್ಷಗಳ ಬೇಡಿಕೆಯ ಬಳಿಕ ಮಂಗಳೂರು ಮೀನುಗಾರಿಕಾ ಧಕ್ಕೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದ್ದರೂ, ಕಾಮಗಾರಿಯ ವೇಗ ನಿದಾನವಾಗಿರುವುದಕ್ಕೆ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಟ್ಟಿ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗೊಳಿಸಿ, ಬಂದರಿನ ಮೂಲಸೌಕರ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಮೀನುಗಾರಿಕಾ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದು ಈ ಬಗ್ಗೆ ಚೇತನ್ ಬೆಂಗ್ರೆ ಯವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

1 ಮತ್ತು 2ನೇ ಹಂತದ ಜೆಟ್ಟಿ ಅಭಿವೃದ್ಧಿಗೆ ₹37.50 ಕೋಟಿ ಹಾಗೂ 3ನೇ ಹಂತದ ಜೆಟ್ಟಿ ಕಾಮಗಾರಿಗೆ ₹49.50 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದರೂ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದರಿಂದ ಬೋಟುಗಳ ಕಾರ್ಯಾಚರಣೆಗೆ ತೊಂದರೆಯಾಗುತ್ತಿದ್ದು, ಮೀನುಗಾರಿಕಾ ಚಟುವಟಿಕೆಗಳಿಗೆ ಬಂದರಿನಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

800ರಿಂದ 1000 ಮೀಟರ್ ಜೆಟ್ಟಿ ನಿರ್ಮಾಣಕ್ಕೆ ಒತ್ತಾಯ
ಪ್ರಸ್ತುತ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಟುಗಳ ಸಂಖ್ಯೆಗೆ ಹೋಲಿಸಿದರೆ ಜೆಟ್ಟಿ ಸ್ಥಳಾವಕಾಶ ಸಾಕಾಗುತ್ತಿಲ್ಲ. ಹೀಗಾಗಿ 800ರಿಂದ 1000 ಮೀಟರ್ ಉದ್ದದ ಜೆಟ್ಟಿ ನಿರ್ಮಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

ನೇತ್ರಾವತಿ ತೀರದ ಸುಮಾರು 250 ಮೀಟರ್ ಪ್ರದೇಶವನ್ನು ಮೀನುಗಾರಿಕಾ ಬಂದರಾಗಿ ಅಭಿವೃದ್ಧಿಪಡಿಸಬೇಕು. 3ನೇ ಹಂತದ ಬಂದರಿನಿಂದ ಕೆಎಫ್‌ಡಿಸಿವರೆಗೆ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಮೀನು ಮಾರುಕಟ್ಟೆಯಿಂದ ಹೆಚ್ಚಿದ ವಾಹನ ದಟ್ಟಣೆ
ಬಂದರಿನಲ್ಲಿರುವ ಮೀನು ಮಾರಾಟ ಮಾರುಕಟ್ಟೆಯಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೊರರಾಜ್ಯಗಳಿಂದ ಪ್ರತಿದಿನ 200ಕ್ಕೂ ಹೆಚ್ಚು ವಾಹನಗಳು ಆಗಮಿಸುವುದರಿಂದ ಬಂದರಿನೊಳಗೆ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ರಂಖ ಹಾಗೂ ಕಮಿಷನ್ ಮೀನು ಮಾರಾಟ ವ್ಯವಸ್ಥೆಯನ್ನು ಬಂದರು ಪ್ರದೇಶದಿಂದ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಮೀನು ಮಾರುಕಟ್ಟೆಯನ್ನು ಮೀನುಗಾರಿಕಾ ಕಾಲೇಜಿನ 3 ಎಕರೆ ಜಾಗಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆ ಕೂಡ ಮುಂದಿಡಲಾಗಿದೆ. ಪರ್ಯಾಯ ಮಾರುಕಟ್ಟೆ ನಿರ್ಮಿಸುವ ಮೂಲಕ ಹಾಲಿ ಬಂದರಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಮನವಿ ಮುಖ್ಯಮಂತ್ರಿಯವರು ಸಚಿವ ಸಂಪುಟ ಸಭೆಯಲ್ಲಿ ಘೋಷಿಸಿರುವ ಹೊಸ ಮೀನುಗಾರಿಕಾ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ಬಂದರಿನ ಮೂಲಸೌಕರ್ಯ, ಜೆಟ್ಟಿ, ಮೀನು ಮಾರುಕಟ್ಟೆ ಹಾಗೂ ವಾಹನ ಸಂಚಾರ ವ್ಯವಸ್ಥೆಯನ್ನು ಒಳಗೊಂಡಂತೆ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಮೀನುಗಾರಿಕಾ ಸಂಘಟನೆಗಳು ಒತ್ತಾಯಿಸಿವೆ.

ಪತ್ರಿಕಾಗೋಷ್ಟಿಯಲ್ಲಿ ಪರ್ಸಿನ್ ಮೀನುಗಾರರ ಸಂಘದ ಮೋಹನ್ ಬೆಂಗ್ರೆ, ರಾಜೇಶ್ ಕುದ್ರೋಳಿ,ಫೈಝಲ್ ಕುದ್ರೋಳಿ, ಸಲೀಂ ನರಿಂಗಾನ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular