ಮಂಗಳೂರು : ದೇಶದ ವಿವಿಧ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ಭಕ್ತರು ಹಾಗೂ ಹಿಂದೂ ಸಮಾಜಕ್ಕೆ ಮರಳಿ ವಹಿಸಿಕೊಡುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ಕದ್ರಿಯ ವಿಶ್ವಶ್ರೀ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಕಾಣಿಕೆ ದುರ್ಬಳಕೆ ತಡೆಯಲು ಆಡಳಿತ ಅನುಭವ ಹೊಂದಿರುವ ಸಿಇಒಗಳನ್ನು ನೇಮಕ ಮಾಡುವ ಅಗತ್ಯವಿದೆ ಎಂದು ಹೇಳಿದರು.
ದೇವಾಲಯಗಳ ಮುಕ್ತಿ ಆಂದೋಲನವನ್ನು 2026ರಲ್ಲಿ ದೇಶಾದ್ಯಂತ ತೀವ್ರಗೊಳಿಸಲು ಯೋಜನೆ ರೂಪಿಸಲಾಗಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಂಸದರು ಹಾಗೂ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಪ್ರಮುಖ ನಗರಗಳಲ್ಲಿ ಹಿರಿಯ ನಾಗರಿಕರು, ಧಾರ್ಮಿಕ ಮುಖಂಡರು ಹಾಗೂ ಗಣ್ಯರನ್ನು ಒಳಗೊಂಡ ಸಮಾವೇಶಗಳನ್ನು ಆಯೋಜಿಸಿ ಸಾರ್ವಜನಿಕ ಬೆಂಬಲವನ್ನು ಕ್ರೋಡೀಕರಿಸಲಾಗುವುದು ಎಂದು ತಿಳಿಸಿದರು.
ಅಯೋಧ್ಯೆ ರಾಮಮಂದಿರದ ಕಾಣಿಕೆ ಅಕ್ರಮ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಅಕ್ರಮ ನಡೆದಿರುವುದನ್ನು ಟ್ರಸ್ಟ್ವೇ ಬಹಿರಂಗವಾಗಿ ಒಪ್ಪಿಕೊಂಡಿದ್ದು, ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿ ಎಸ್ಐಟಿ ತನಿಖೆಗೆ ಮನವಿ ಮಾಡಿದೆ ಎಂದು ಹೇಳಿದರು. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ಜೈಲು ಶಿಕ್ಷೆಯಾಗಬೇಕು ಎಂಬುದು ವಿಎಚ್ಪಿಯ ಆಗ್ರಹ ಎಂದು ತಿಳಿಸಿದರು. ಅಯೋಧ್ಯೆ ಪ್ರಕರಣದಲ್ಲಿ ಯಾವುದೇ ಸಾಧು-ಸಂತರ ಹೆಸರು ಇಲ್ಲದಿದ್ದರೂ, ಕಾವಿ ವಸ್ತ್ರ ಧರಿಸಿ ನಡೆಸಿದ ಪ್ರತಿಭಟನೆಗಳ ಮೂಲಕ ಸನಾತನ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.ಮುಂಬರುವ ಚುನಾವಣೆಯಲ್ಲಿ ಸಮಾಜ ಹಾಗೂ ಭಕ್ತರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ, ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಹಿಂದೆ ಎಡಪಂಥೀಯ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿದ ಅಲೋಕ್ ಕುಮಾರ್, ಪೊಲೀಸ್ ಎಐ ಕ್ಯಾಮೆರಾಗಳಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ಹಲವರು ಭಾಗವಹಿಸಿದ್ದರು ಎಂದು ಹೇಳಿದರು. ಬ್ಯಾನರ್ಗಳಲ್ಲಿ ಅಶ್ಲೀಲ ಹಾಗೂ ಕೀಳುಮಟ್ಟದ ಭಾಷೆ ಬಳಸಿ ಸಮಾಜವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

