ಮಂಗಳೂರು: ಗೋವಾದಿಂದ ಮಂಗಳೂರು ಹಾಗೂ ಉಡುಪಿ ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.
ಆಗಸ್ಟ್ 22ರಂದು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಎಚ್. ಅವರ ಆದೇಶದ ಮೇರೆಗೆ ಹಾಗೂ ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಸ್ವಿಫ್ಟ್ ಡಿಸೈರ್ ಕಾರು ಸೇರಿದಂತೆ 438 ಲೀಟರ್ ಅಕ್ರಮ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪರವಾನಗಿ ಇಲ್ಲದೆ ಗೋವಾದಿಂದ ಮದ್ಯವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಮಾಲೀಕ ಬಸವರಾಜು ಬೋವಿ ಹಾಗೂ ಚಾಲಕಿ ನಾಗವೇಣಿ ನಾಯಕ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್., ಬಂಟ್ವಾಳ ಉಪವಿಭಾಗದ ಉಪ ಅಧೀಕ್ಷಕ ಸಂತೋಷ್ ಮೋಡಗಿ, ಬಂಟ್ವಾಳ ತಾಲೂಕು ವಲಯ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ, ತಲಪಾಡಿ ಚೆಕ್‌ಪೋಸ್ಟ್ ನಿರೀಕ್ಷಕ ದತ್ತಗುರು ಅಥೆಣಿ, ಉಪ ನಿರೀಕ್ಷಕರಾದ ಜಯಪ್ಪ, ಶಿವಶಂಕರ್, ಅಭಿಷೇಕ್ ಹಾಗೂ ಪೇದೆ ಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಜಂಟಿ ಆಯುಕ್ತರ ಕಚೇರಿಯ ನಿರೀಕ್ಷಕಿ ಸುನಿತಾ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಗೋವಾದಿಂದ ಕೇರಳಕ್ಕೆ ನಡೆಯುತ್ತಿದ್ದ ಅಕ್ರಮ ಮದ್ಯ ಸಾಗಾಟದ ಜಾಲದ ಕುರಿತು ತನಿಖೆ ಮುಂದುವರಿದಿದೆ.

