Thursday, August 6, 2026
Homeಜಿಲ್ಲೆಮಂಗಳೂರು : ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ಮೆಗಾ ಘೋಷಣೆ,450 ಹೊಸ 108 ಆಂಬುಲೆನ್ಸ್, 4...

ಮಂಗಳೂರು : ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ಮೆಗಾ ಘೋಷಣೆ,450 ಹೊಸ 108 ಆಂಬುಲೆನ್ಸ್, 4 ಸಾವಿರ ಆರೋಗ್ಯ ಸಿಬ್ಬಂದಿ ನೇಮಕ.

ಮಂಗಳೂರು : ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಆರೋಗ್ಯ ಯೋಜನೆಗಳನ್ನು ಘೋಷಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಹೆಚ್ಚಿಸುವುದು, ತುರ್ತು ವೈದ್ಯಕೀಯ ಸೇವೆ ವಿಸ್ತರಿಸುವುದು, ಆರೋಗ್ಯ ವಿಮೆ ಯೋಜನೆಗಳ ವ್ಯಾಪ್ತಿ ಹೆಚ್ಚಿಸುವುದು ಹಾಗೂ ಸರ್ಕಾರಿ ನೌಕರರು, ನಿವೃತ್ತರು ಮತ್ತು ಹಿರಿಯ ನಾಗರಿಕರಿಗೆ ಹೊಸ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಗುರಿಯೊಂದಿಗೆ ಸಮಗ್ರ ಕಾರ್ಯಯೋಜನೆ ರೂಪಿಸಲಾಗಿದೆ.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (PHC) ವೈದ್ಯರು, ನರ್ಸ್‌ಗಳು, ಫಾರ್ಮಸಿಸ್ಟ್‌ಗಳು ಮತ್ತು ಪ್ರಯೋಗಾಲಯ ತಂತ್ರಜ್ಞರ ನೇಮಕಾತಿ ಪ್ರಕ್ರಿಯೆ ವೇಗಗೊಳಿಸಲಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ 200 ಎಂಬಿಬಿಎಸ್ ವೈದ್ಯರು ಸೇವೆಗೆ ಸೇರಿದ್ದು, ಸುಮಾರು 1,000 ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ಜೊತೆಗೆ 3,000 ಹೊಸ ಹುದ್ದೆಗಳ ಭರ್ತಿಗೂ ಅನುಮೋದನೆ ನೀಡಲಾಗಿದೆ.

ತುರ್ತು ವೈದ್ಯಕೀಯ ಸೇವೆ ಬಲಪಡಿಸಲು 450 ಹೊಸ 108 ಆಂಬುಲೆನ್ಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿ ಒಟ್ಟು ಆಂಬುಲೆನ್ಸ್‌ಗಳ ಸಂಖ್ಯೆ 750ಕ್ಕೂ ಹೆಚ್ಚು ಆಗಲಿದೆ. ನಗರ ಪ್ರದೇಶಗಳಲ್ಲಿ 15 ನಿಮಿಷ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 20 ನಿಮಿಷಗಳಲ್ಲಿ ಆಂಬುಲೆನ್ಸ್ ತಲುಪಿಸುವ ಗುರಿ ಹೊಂದಲಾಗಿದೆ. ಟ್ರಾಫಿಕ್ ದಟ್ಟಣೆ ಇರುವ ನಗರಗಳಲ್ಲಿ 100 ಬೈಕ್ಬು ಅಂಬ್ಯುಲೆನ್ಸ್‌ಗಳನ್ನೂ ಆರಂಭಿಸಲಾಗುತ್ತದೆ.ಆಯುಷ್ಮಾನ್ ಕರ್ನಾಟಕ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಆಗುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಹೆಚ್ಚುವರಿ ವೆಚ್ಚವಿಲ್ಲದೆ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಯೋಜನೆಯನ್ನು ಅರ್ಹ ಎಪಿಎಲ್ ಕುಟುಂಬಗಳಿಗೂ ವಿಸ್ತರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ಲಭ್ಯವಿರುವ ಚಿಕಿತ್ಸೆಗಳ ಸಂಖ್ಯೆಯನ್ನು 1,500ರಿಂದ ಸುಮಾರು 3,000ಕ್ಕೆ ಹೆಚ್ಚಿಸಲಾಗುತ್ತಿದೆ. ನಿವೃತ್ತ ಸರ್ಕಾರಿ ನೌಕರರಿಗಾಗಿ ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆ ಹಾಗೂ 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ‘ವಯೋ ವಂದನಾ’ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ.

ಈ ಎಲ್ಲಾ ಯೋಜನೆಗಳ ಮೂಲಕ ರಾಜ್ಯದ ಜನರಿಗೆ ಸುಲಭ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular