ಮಂಗಳೂರು : ಸಮಾಜಸೇವೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯುವ ಉದ್ಯಮಿ ಪ್ರಕಾಶ್ ಕುಂಪಲ ಇದೀಗ ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಪ್ರಕಾಶ್ ಕುಂಪಲ ಅವರ ನಿರ್ಮಾಣದ Maa Mantra Ventures ಹಾಗೂ PK Production ಅರ್ಪಿಸುವ ಬಹುನಿರೀಕ್ಷಿತ ತುಳು-ಕನ್ನಡ ಸಿನಿಮಾದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದಾರೆ.
‘ನಮ್ಮ ಕುಡ್ಲ’ ಸಿನಿಮಾದ ನಿರ್ದೇಶನದ ಮೂಲಕ ತುಳು ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವಿನಿ ಜಿ. ಕೋಟ್ಯಾನ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.
ಚಿತ್ರದ ಕಥೆಯನ್ನು ರಾಜ್ ಪ್ರಕಾಶ್ ಶೆಟ್ಟಿ ರಚಿಸಿದ್ದು, ಸಂಭಾಷಣೆಯನ್ನು ಡಿ.ಬಿ.ಸಿ. ಶೇಖರ್ ಬರೆದಿದ್ದಾರೆ. ಪ್ರಕಾಶ್ ಕುಂಪಲ ಹಾಗೂ ಎನ್.ಬಿ. ಶರವಣ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅನಿಲ್ ಕರ್ಕೇರ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಹೊಸ ಪ್ರತಿಭೆಗಳಿಗೆ ಅವಕಾಶ
ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಿತ್ರತಂಡವು ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ. ಮಂಗಳೂರು ಮತ್ತು ಉಡುಪಿ ಭಾಗದ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಮಂಗಳೂರಿನಲ್ಲಿ 35 ದಿನಗಳ ಚಿತ್ರೀಕರಣ
ಚಿತ್ರದ ಚಿತ್ರೀಕರಣ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 35 ದಿನಗಳ ಕಾಲ ಒಂದೇ ಹಂತದಲ್ಲಿ ನಡೆಯಲಿದೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರೀಕರಣ ಪೂರ್ಣಗೊಂಡ ಬಳಿಕ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿ, ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.
ವಿಭಿನ್ನ ಕಥಾಹಂದರ, ಹೊಸ ಪ್ರತಿಭೆಗಳ ಸಮಾಗಮ ಹಾಗೂ ಸಾಮಾಜಿಕ ಕಳಕಳಿಯ ಸಂದೇಶವನ್ನು ಒಳಗೊಂಡಿರುವ ಈ ಸಿನಿಮಾ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಪ್ರಕಾಶ್ ಕುಂಪಲ, ಎನ್.ಬಿ. ಶರವಣ, ನಿರ್ದೇಶಕಿ ಅಶ್ವಿನಿ ಜಿ. ಕೋಟ್ಯಾನ್, ಕಥೆಗಾರ ರಾಜ್ ಪ್ರಕಾಶ್ ಶೆಟ್ಟಿ, ಸಂಭಾಷಣೆಕಾರ ಡಿ.ಬಿ.ಸಿ. ಶೇಖರ್, ಕಾರ್ಯಕಾರಿ ನಿರ್ಮಾಪಕ ಅನಿಲ್ ಕರ್ಕೇರ ಹಾಗೂ ತುಳು ಚಿತ್ರ ನಿರ್ಮಾಪಕ ಪಮ್ಮಿ ಕೊಡಿಯಾಲ್ ಬೈಲ್ ಉಪಸ್ಥಿತರಿದ್ದರು.

