ಬೆಳ್ತಂಗಡಿ : ಸರ್ಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಔಷಧ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಪೂಜಾರಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ಷಗಳ ಕಾಲ ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ವಿರುದ್ಧ ಇದೀಗ ಸಿಬ್ಬಂದಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆಯ ಉಗ್ರಾಣದಲ್ಲಿ ಕರ್ತವ್ಯದ ವೇಳೆ ಕಿರುಕುಳ ನೀಡಿದ್ದು, ವಿಷಯ ಬಹಿರಂಗಪಡಿಸಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಸ್ಪತ್ರೆಯಲ್ಲಿ ಈ ಹಿಂದೆ ಕೂಡ ಚಂದ್ರಶೇಖರ್ ವಿರುದ್ಧ ವಿವಿಧ ಆರೋಪಗಳು ಕೇಳಿಬಂದಿದ್ದವು ಎನ್ನಲಾಗಿದ್ದು, ಮಹಿಳಾ ಸಿಬ್ಬಂದಿಗಳೊಂದಿಗೆ ಅಸಭ್ಯ ವರ್ತನೆ ನಡೆಸುತ್ತಿದ್ದಾನೆ ಎಂಬ ಮಾತುಗಳು ಆಸ್ಪತ್ರೆ ವಲಯದಲ್ಲಿ ಹರಿದಾಡುತ್ತಿದ್ದವು. ಆದರೆ ಭಯ ಹಾಗೂ ಸಾಮಾಜಿಕ ಒತ್ತಡದಿಂದ ಯಾರೂ ಬಹಿರಂಗವಾಗಿ ದೂರು ನೀಡಿರಲಿಲ್ಲ ಎಂದು ತಿಳಿದುಬಂದಿದೆ. ಇದೀಗ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆಸ್ಪತ್ರೆಯ ಒಳಗಿನ ಕಾರ್ಯವೈಖರಿ ಹಾಗೂ ಹಿಂದಿನ ಆರೋಪಗಳ ಕುರಿತೂ ತನಿಖೆ ನಡೆಯುವ ಸಾಧ್ಯತೆ ಇದೆ.
BNS-20230 2 75(3), 79 2 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

